ಜಿಲ್ಲೆ

ಸಾ.ರಾ.ಮಹೇಶ್ ಸುಳ್ಳು ಹೇಳಿಕೆ ನಿಲ್ಲಿಸಲಿ; ಜಿ.ಟಿ.ದೇವೇಗೌಡ ತಾಕೀತು

ಮಂಜುನಾಥ ತಿಮ್ಮಯ್ಯ

ಮೈಸೂರು: ನನ್ನನ್ನು ಉಪಚುನಾವಣೆ ಪ್ರಚಾರಕ್ಕೆ ಕರೆದಿದ್ದೇನೆ ಎಂದು ಎಚ್.ಡಿ.ದೇವೇಗೌಡರು ಹೇಳಲಿ. ನಾನು ಅಂದೇ ರಾಜಕಾರಣವನ್ನು ಬಿಟ್ಟುಬಿಡುತ್ತೇನೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಶಾಸಕ ಜಿ.ಟಿ.ದೇವೇಗೌಡ ಅವರು ಶಾಸಕ ಸಾ.ರಾ.ಮಹೇಶ್‌ಗೆ ಸವಾಲು ಹಾಕಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾ.ರಾ.ಮಹೇಶ್ ಸುಳ್ಳು ಹೇಳುವುದನ್ನು ನಿಲ್ಲಿಸಬೇಕು. ಸುಳ್ಳು ಹೇಳಿಕೊಂಡು ಚಾಮುಂಡಿಬೆಟ್ಟಕ್ಕೆ ಬಾ, ಅಲ್ಲಿಗೆ ಬಾ ಅಂದರೆ ಹೋಗಲು ಆಗುತ್ತದೆಯೇ? ಈ ಹಿಂದೆ ಎಚ್.ವಿಶ್ವನಾಥ್ ಜತೆಗೆ ಚಾಮುಂಡಿಬೆಟ್ಟಕ್ಕೆ ಹೋಗಿ ಅವರ ಕಥೆ ಏನಾಯಿತು. ಆ ಕಥೆ ನನಗೂ ಆಗಬೇಕಾ? ಎಂದು ಪ್ರಶ್ನಿಸಿದರು.

ನಾನು ತಪ್ಪು ಮಾಡಿದ್ದರೆ ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ. ಒಂದು ಬಾರಿ ಯಾವುದೋ ತಪ್ಪು ಮಾಡಿದ್ದೆ. ಅಂದು ಸಂಜೆಯೇ ನನ್ನ ತಾಯಿ ಬಳಿ ಹೋಗಿ ತಪ್ಪು ಒಪ್ಪುಕೊಂಡಿದ್ದೆ. ನಾನು ಯಾವುದಕ್ಕೂ ಹೆದರುವುದಿಲ್ಲ. ಸುಳ್ಳು ಹೇಳುವವನು ನಾನಲ್ಲ ಎಂದು ಹರಿಹಾಯ್ದರು.

ನನಗೆ ಯಾರೋ ಒಬ್ಬರ ಹೆಸರು ಇಟ್ಟುಕೊಂಡು ರಾಜಕಾರಣ ಮಾಡುವ ಅನಿವಾರ್ಯತೆ ನನಗಿಲ್ಲ. ಯಾರು ಇಲ್ಲದಿದ್ದರೂ ನಾನು ರಾಜಕಾರಣ ಮಾಡಿದ್ದೇನೆ. ನನಗೆ ರಾಜಕೀಯ ಮಾಡುವುದು ಗೊತ್ತು. ನಾನು ಯಾರ ಕತ್ತನ್ನು ಕೊಯ್ದಿಲ್ಲ. ನನ್ನನ್ನು ಯಾರು ಯಾವ ಪಕ್ಷಕ್ಕೂ ಕರೆ ತಂದಿಲ್ಲ. ನಾನು ಸ್ವಂತವಾಗಿ ರಾಜಕಾರಣ ಮಾಡಿದವನು ಎಂದು ಹೇಳಿದರು.

ಜೆಡಿಎಸ್‌ನಲ್ಲಿ ನೋವು ನನಗೆ ಹೊಸದಲ್ಲ. ನನಗೆ ಹಲವು ಬಾರಿ ಇಂತಹ ನೋವು ಉಂಟಾಗಿದೆ. ಈಗಲೂ ಮತ್ತೊಂದು ನೋವು ಆಗುತ್ತಿದೆ. ನನಗೆ ಪದೇ ಪದೇ ಈ ರೀತಿ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಇಂದಿನವರೆಗೂ ಯಾವುದೇ ಜೆಡಿಎಸ್ ಶಾಸಕರ ಜತೆಗೆ ಮಾತನಾಡಿಲ್ಲ. ಯಾರಿಗಾದರೂ ನೋವಾಗಿದ್ದರೆ, ಅವರಾಗಿಯೇ ಮಾತನಾಡಿದರೆ ಮಾತನಾಡುತ್ತೇನೆ. ನಾನಾಗೆ ಮಾತನಾಡುವುದಿಲ್ಲ. ಸಿ.ಪಿ.ಯೋಗೇಶ್ವರ್ ಜತೆಗೆ ಉಪಚುನಾವಣೆಗೂ ಮುಂಚೆ ಮಾತನಾಡಿದ್ದೆ. ಚುನಾವಣೆ ಮುಗಿದ ಮೇಲೆ ಮಾತನಾಡಿಲ್ಲ. ಅವರು ಕೂಡ ಕರೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು

ಸಿ.ಎಂ.ಇಬ್ರಾಹಿಂಗೆ ಪ್ರತ್ಯೇಕ ಪ್ರಾದೇಶಿಕ ಪಕ್ಷ ಕಟ್ಟುವ ಉತ್ಸಾಹ ಇದೆ. ಅದನ್ನು ನನ್ನ ಬಳಿ ಹೇಳಿಕೊಂಡಿದ್ದಾರೆ. ರಾಜ್ಯ ಪ್ರವಾಸ ಮುಗಿಸಿಕೊಂಡು ಮತ್ತೆ ಮಾತನಾಡುತ್ತೇನೆಂದು ಹೇಳಿ ಹೋಗಿದ್ದಾರೆ. ಶಾಸಕರನ್ನು ಕಟ್ಟಿಕೊಂಡು ಪಕ್ಷಗಳನ್ನು ಕಟ್ಟಲು ಆಗುವುದಿಲ್ಲ. ಪಕ್ಷ ಕಟ್ಟಲು ಕಾರ್ಯಕರ್ತರು ಬೇಕು. ನಾನು ಅವರು ಹೇಳಿದ್ದನ್ನು ಕೇಳಿಸಿಕೊಂಡಿದ್ದೇನೆ ಅಷ್ಟೆ ಎಂದರು.

ಜಿ.ಟಿ.ದೇವೇಗೌಡರು ಚರ್ಚೆಗೆ ಬರಲಿ ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹೇಳಿಕೆಗೆ ಕಿಡಿಕಾರಿದ ಅವರು, ಸ್ನೇಹಮಯಿ ಏನು ಜಡ್ಜಾ? ನಾನೇಕೆ ಅವನ ಜತೆಗೆ ಚರ್ಚೆಗೆ ಹೋಗಲಿ? ನಾನು ಜಿ.ಟಿ.ದೇವೇಗೌಡ. ನನ್ನ ಜತೆ ಹುಡಾಗಾಟ ಆಡಬೇಡಿ. ನಾನು ಯಾವ ತಪ್ಪು ಮಾಡಿದ್ದೇನೆ ಹೇಳಿ? ನನ್ನ ಸಂಬಂಧಿಕರು ಬಹಳಷ್ಟು ಜನರಿದ್ದಾರೆ. ಎಲ್ಲರೂ ಮಾಡಿದ್ದನ್ನು ನನಗೆ ಹೇಳಿದರೆ, ಅದನ್ನು ಕೇಳಲು ನಾನು ಸಿದ್ಧ್ದನಿಲ್ಲ ಎಂದು ಕಿಡಿಕಾರಿದರು.