ಜಿಲ್ಲೆ

ಸಾ.ರಾ. ಚೌಲ್ಟ್ರಿ ವಿರುದ್ಧ ಮತ್ತೆ ತನಿಖೆಗೆ ಆದೇಶ

ಮೈಸೂರು: ನಾಲ್ಕು ವರ್ಷಗಳ ಹಿಂದೆ ವಿವಾದಕ್ಕೆ ಕಾರಣವಾಗಿದ್ದ ದಟ್ಟಗಳ್ಳಿಯಲ್ಲಿರುವ ಸಾ.ರಾ. ಕಲ್ಯಾಣ ಮಂಟಪ ನಿರ್ಮಾಣ ಜಾಗ ವಿವಾದ ಮತ್ತೆ ಸದ್ದು ಮಾಡಿದ್ದು, ಮತ್ತೊಮ್ಮೆ ತನಿಖೆಗೆ ಆದೇಶಿಸಲಾಗಿದೆ.

ಮೈಸೂರು ನಗರ ಕಸಬಾ ಹೋಬಳಿ ದಟ್ಟಗಳ್ಳಿ ಗ್ರಾಮದ ಸರ್ವೇ ನಂ.130/3ರಲ್ಲಿ 2 ಎಕರೆ 15 ಗುಂಟೆ ಜಮೀನಿನಲ್ಲಿ ಕಾನೂನುಬಾಹಿರವಾಗಿ ಸಾ.ರಾ.ಚೌಲ್ಟ್ರಿ ನಿರ್ಮಿಸಲಾಗಿದೆ. ಹೀಗಾಗಿ, ಇದನ್ನು ನಿರ್ಮಿಸಿರುವ ಮಾಲೀಕರ ವಿರುದ್ಧ, ಇದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಂಗರಾಜು ಅವರು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗೆ ಮತ್ತೆ ದೂರು ನೀಡಿದ್ದರು. ಇದನ್ನು ಪರಿಗಣಿಸಿರುವ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕೆ.ಲತಾ ಅವರು, ಮಾ.10ರಂದು ಈ ಕುರಿತು ಮತ್ತೆ ಆದೇಶ ಹೊರಡಿಸಿದ್ದಾರೆ.

ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಅಭಿವೃದ್ಧಿ ಪ್ರಾಧಿಕಾರಗಳು, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರಿಗೆ ಸೂಚಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ದೂರಿನ ಪ್ರತಿಯನ್ನು ರವಾನಿಸಲಾಗಿದೆ.

ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಹಿಂದೆ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಮಧ್ಯೆ ಜಟಾಪಟಿಗೆ ಇದು ಅಸ್ತ್ರವಾಗಿತ್ತು. ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿ ಆಗಿದ್ದ ಅವಧಿಯಲ್ಲಿ ಅಂದಿನ ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ, ಯಾವುದೇ ಅಕ್ರಮವಾಗಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದ್ದರು. ಇದೀಗ 2ನೇ ಬಾರಿಗೆ ತನಿಖೆಗೆ ಆದೇಶ ನೀಡಿರುವುದು ಮತ್ತೊಮ್ಮೆ ವಿವಾದದ ಕಿಡಿ ಹೊತ್ತುವ ಸಾಧ್ಯತೆ ಇದೆ.

ಪ್ರಕರಣದ ಹಿನ್ನೆಲೆ:

4 ವರ್ಷಗಳ ಹಿಂದೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ‘ಜಿಲ್ಲಾಧಿಕಾರಿ ಅಧಿಕೃತ ಸರ್ಕಾರಿ ಗೃಹ’ದಲ್ಲಿ ಸರ್ಕಾರದ ಅನುಮತಿ ಪಡೆಯದೆ ನವೀಕರಣ, ಈಜುಕೊಳ ನಿರ್ಮಾಣದ ಬಗ್ಗೆ ಸಾ.ರಾ.ಮಹೇಶ್ ದಾಖಲೆ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಸಾ.ರಾ.ಕನ್ವೆನ್ಷನ್ ಹಾಲ್ ಅನ್ನು ರಾಜಕಾಲುವೆ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದೆ ಎಂದು ದೂರು ಕೇಳಿಬಂದಿತ್ತು.

ಈ ಕುರಿತು ಸರ್ಕಾರ ತನಿಖೆಗೆ ಆದೇಶ ನೀಡಿದ್ದಲ್ಲದೆ, ಪ್ರಾದೇಶಿಕ ಆಯುಕ್ತರಿಗೆ ವರದಿ ನೀಡುವಂತೆ ಸೂಚಿಸಿತ್ತು. ನಂತರ, ಅಂದಿನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಭೂ ದಾಖಲೆಗಳ ಉಪ ನಿರ್ದೇಶಕರ ತಂಡ ಸ್ಥಳ ಪರಿಶೀಲಿಸಿತ್ತು. ಇದಾದ ಬಳಿಕ ಪ್ರಾದೇಶಿಕ ಆಯುಕ್ತರು ಭೇಟಿ ನೀಡಿ, ಮಾಹಿತಿ ಪಡೆದುಕೊಂಡಿದ್ದರು.

‘ಯಾವುದೇ ಒತ್ತುವರಿ ಆಗಿಲ್ಲ ಮತ್ತು ಯಾವುದೇ ನಿ ಯಮ ಉಲ್ಲಂಘಿಸಿಲ್ಲ’ ಎಂದು ವರದಿ ನೀಡಿದ ಬಳಿಕ ವಿವಾದ ತೆರೆಮರೆಗೆ ಸರಿದಿತ್ತು. ಈ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ವರ್ಗಾವಣೆಯಾದ ಮೇಲೆ ಜಾಗದ ವಿಚಾರ ಸಂಪೂರ್ಣ ತಣ್ಣಗಾಗಿತ್ತು. ಆದರೀಗ ಸಾಮಾಜಿಕ ಕಾರ್ಯಕರ್ತ ಗಂಗರಾಜು ದೂರಿನ ಮೇರೆಗೆ ನಗರಾಭಿವೃದ್ಧಿ ಕಾರ್ಯದರ್ಶಿಯವರು ತನಿಖೆಗೆ ಆದೇಶ ನೀಡಿರುವುದು ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಗೆ ಕಾರಣವಾಗಲಿದೆ.