ಜಿಲ್ಲೆ

ಸಹಾಯವಾಣಿ ಸಿಬ್ಬಂದಿಗಿಲ್ಲ ಅಂತರ !

ಹುಬ್ಬಳ್ಳಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡುವ ಆರೋಗ್ಯ ಇಲಾಖೆಯ ‘104’ ಸಹಾಯವಾಣಿ ಸಿಬ್ಬಂದಿಯೇ ಆ ನಿಯಮ ಉಲ್ಲಂಘನೆ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ.

ಕರೊನಾ ವೈರಸ್ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಾಗೂ ಜಾಗೃತಿ ಗಾಗಿ ಆರೋಗ್ಯ ಇಲಾಖೆ 104 ಸಂಖ್ಯೆಯ ಆರೋಗ್ಯ ಸಹಾಯವಾಣಿ ಆರಂಭಿಸಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಮಾತ್ರ ಸಹಾಯ ವಾಣಿ ಕೇಂದ್ರ ತೆರೆಯಲಾಗಿದ್ದು, ಸಮರೋಪಾದಿ ಯಲ್ಲಿ ಕೆಲಸವೂ ನಡೆಯುತ್ತಿದೆ. ರಾಜ್ಯದ ನಾನಾ ಭಾಗಗಳಿಂದ ಬರುವ ಸಾವಿರಾರು ಕರೆಗಳಿಗೆ ಉತ್ತರ, ಸ್ಪಂದನೆ ಹಾಗೂ ಪರಿಹಾರವನ್ನೂ ಒದಗಿಸಲಾಗುತ್ತಿದೆ.

ಆದರೆ, ಹುಬ್ಬಳ್ಳಿಯ ಸಹಾಯವಾಣಿ ಸಿಬ್ಬಂದಿಗೆ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಭೀತಿ ಹುಟ್ಟಿಸಿದೆ. ಈ ಕಚೇರಿಯಲ್ಲಿ 320ಕ್ಕೂ ಹೆಚ್ಚು ಸಿಬ್ಬಂದಿ ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಧಾರವಾಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಕಚೇರಿಗೆ ಆಗಮಿಸುತ್ತಾರೆ. ಇವರನ್ನು ಕಚೇರಿಗೆ ಕರೆತರಲು ಕೇವಲ ಎರಡು ಕ್ರೂಸರ್​ಗಳ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ, ಅಂತರ ಇಲ್ಲದೇ ಎಲ್ಲರನ್ನೂ ಒಟ್ಟಿಗೆ ತುಂಬಿಕೊಂಡು ಬರಲಾಗುತ್ತಿದೆ. ಇದರಿಂದ ಆರೋಗ್ಯ ಸಿಬ್ಬಂದಿಗೇ ವೈರಸ್ ಹರಡುವ ಭೀತಿ ಎದುರಾಗಿದೆ.

104 ಸಂಖ್ಯೆಗೆ ಕರೆ ಮಾಡಿದವರಿಗೆಲ್ಲ ‘ಕನಿಷ್ಠ 1ರಿಂದ 3 ಮೀಟರ್ ಪರಸ್ಪರ ಅಂತರ ಕಾಯ್ದುಕೊಳ್ಳಿ’ ಎಂದು ಹೇಳುವ ಸಿಬ್ಬಂದಿಗೇ ಈ ನಿಯಮ ಪಾಲಿಸಲು ಆಗುತ್ತಿಲ್ಲ. ಹಾಗಾಗಿ, ಈ ಕೂಡಲೇ ಆರೋಗ್ಯ ಇಲಾಖೆ ಸಿಬ್ಬಂದಿ ಕರೆತರಲು ಮತ್ತು ಬಿಟ್ಟುಬರಲು ಬಸ್ ವ್ಯವಸ್ಥೆ ಮಾಡಬೇಕು. ಆ ಮೂಲಕ ಸಹಾಯವಾಣಿ ಸಿಬ್ಬಂದಿಯ ಆರೋಗ್ಯ ಕಾಪಾಡಬೇಕು ಎಂಬುದು ‘ವಿಜಯವಾಣಿ’ ಕಳಕಳಿ.