ಜಿಲ್ಲೆ

ಸಹಾಯವಾಣಿ ಕೇಂದ್ರದ ಅಸಹಾಯಕತೆ!

ಶಿರಸಿ: ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ತುರ್ತಾಗಿ ಸ್ಪಂದಿಸುತ್ತಿದ್ದ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರಗಳು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿವೆ. ಸಂತ್ರಸ್ತರ ನೆರವಿಗೆ ತೆರಳಲು ಲೆಕ್ಕ ಹಾಕುವಂಥ ಸ್ಥಿತಿ ನಿರ್ವಣವಾಗಿದೆ.

ಜಿಲ್ಲೆಯ ಎಲ್ಲ 12 ತಾಲೂಕು ಕೇಂದ್ರಗಳಲ್ಲೂ ಮಹಿಳಾ ಸಾಂತ್ವನ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ, ಸಂಪರ್ಕದ ಸಮಸ್ಯೆ, ಕಚೇರಿ ನಿರ್ವಹಣೆಗೆ 10 ತಿಂಗಳಿಂದ ಹಣಕಾಸಿನ ಮುಗ್ಗಟ್ಟು ಎದುರಾಗಿದ್ದು, ಸಾಂತ್ವನದ ಜತೆ ನೆರವು ನೀಡಬೇಕೆಂಬ ಸಿಬ್ಬಂದಿಯ ಕೈ ಕೈಟ್ಟಿ ಹಾಕಿದಂತಾಗಿದೆ.

ಏನಿದು ಸಮಸ್ಯೆ?: ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸರ್ಕಾರದಿಂದ ಎನ್​ಜಿಒಗಳ ಮೂಲಕ ಸಾಂತ್ವನ ಕೇಂದ್ರಗಳನ್ನು ಆರಂಭಿಸಲಾಗಿದೆ. ವರದಕ್ಷಿಣೆ ಕಿರುಕುಳ, ಕೌಟುಂಬಿಕ, ಲೈಂಗಿಕ ದೌರ್ಜನ್ಯ ಸೇರಿ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಮತ್ತಿತರ ಪ್ರಕರಣಗಳ ವೇಳೆ ಸಹಾಯ ಕೋರಿ ಬರುವ ಸಂತ್ರಸ್ತರಿಗೆ ನೆರವು ನೀಡುವುದು ಈ ಕೇಂದ್ರಗಳ ಉದ್ದೇಶವಾಗಿದೆ. ಜಿಲ್ಲೆಯ ಸಾಂತ್ವನ ಕೇಂದ್ರಗಳನ್ನು ಎನ್​ಜಿಒ ಗಳಿಂದ ನಿರ್ವಹಣೆ ಮಾಡಲಾಗುತ್ತಿದೆ. ಆದರೆ, ಸರ್ಕಾರದಿಂದ ಬರಬೇಕಿದ್ದ ಅನುದಾನ ಮಾತ್ರ ಈವರೆಗೆ ಬಿಡುಗಡೆಯಾಗಿಲ್ಲ.

ನಿರ್ವಹಣೆಗೆ ಅಡಚಣೆ: ಜಿಲ್ಲೆಯಲ್ಲಿ 2020-21ರಲ್ಲಿ 614 ಪ್ರಕರಣಗಳು ದಾಖಲಾಗಿವೆ. ಹಲವು ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲು ಏರದಂಥ ಸ್ಥಿತಿ ಗ್ರಾಮೀಣ ಪ್ರದೇಶದಲ್ಲಿದೆ. ಇಂಥ ಸಂದರ್ಭದಲ್ಲಿ ಮಹಿಳೆಯರಿಗೆ ನೆರವಾಗಬೇಕಾದ ಸಾಂತ್ವನ ಕೇಂದ್ರಗಳಿಗೆ ಸರ್ಕಾರದ ಆರ್ಥಿಕ ನೆರವು ಅತ್ಯಗತ್ಯ. ಜಿಲ್ಲೆಯಲ್ಲಿರುವ ಪ್ರತಿ ಕೇಂದ್ರದ ನಿರ್ವಹಣೆಗೆ ವಾರ್ಷಿಕ 60 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಪ್ರತಿಯೊಂದು ಕೇಂದ್ರದಲ್ಲಿ ಒಬ್ಬ ಕೌಟುಂಬಿಕ ಸಲಹೆಗಾರರು ಮತ್ತು ಮೂವರು ಸಾಮಾಜಿಕ ಕಾರ್ಯಕರ್ತರು ಇರುತ್ತಾರೆ. ಅವರೆಲ್ಲರೂ ಸರ್ಕಾರ ಕೊಡುತ್ತಿರುವ ಬಿಡಿಗಾಸಿನಿಂದ ಕೇಂದ್ರ ನಿರ್ವಹಣೆ ಅಸಾಧ್ಯ. ಹೀಗಾಗಿ ಎನ್​ಜಿಒ ಖರ್ಚಿನಲ್ಲಿಯೇ ಕೇಂದ್ರ ಮುನ್ನಡೆಸುವಂಥ ಪರಿಸ್ಥಿತಿ ನಿರ್ವಣವಾಗಿದೆ.

ಸಂತ್ರಸ್ತ ಮಹಿಳೆಯನ್ನು ಕೇಂದ್ರಕ್ಕೆ ಕರೆತಂದು ಅವರಿಗೆ ಸಾಂತ್ವನ ಹೇಳುವ ಹಾಗೂ ಅವರ ಬದುಕಿಗೆ ಭದ್ರತೆ ಕಲ್ಪಿಸುವ ಕೆಲಸಕ್ಕೆ ಆರ್ಥಿಕ ಮುಗ್ಗಟ್ಟು ಕಾಡುತ್ತಿದೆ. ದೂರು ಸಲ್ಲಿಸುವ ಸಂತ್ರಸ್ತ ಮಹಿಳೆಯರನ್ನು ಕೇಂದ್ರಕ್ಕೆ ಕರೆತಂದು ತೀವ್ರ ತರದ ದೌರ್ಜನ್ಯ ಅನುಭವಿಸಿದ್ದರೆ ಅವರನ್ನು ಕೇಂದ್ರದಲ್ಲಿ ಇರಿಸಿಕೊಳ್ಳಲೂ ಆಗದಂಥ ಪರಿಸ್ಥಿತಿ ಕೇಂದ್ರಗಳಲ್ಲಿದೆ. ಸಂತ್ರಸ್ತ ಮಹಿಳೆಯರನ್ನು ಬಾಲಮಂದಿರಕ್ಕೆ ಒಂದೆರಡು ದಿನಗಳ ಮಟ್ಟಿಗೆ ಕಳಿಸಿಕೊಡಲಾಗುತ್ತಿದೆ. ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಸರ್ಕಾರ ಕೂಡಲೆ ಅಗತ್ಯ ಮೂಲಸೌಲಭ್ಯ ಹಾಗೂ ಅನುದಾನ ಒದಗಿಸಬೇಕು ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

ಡಿಸೆಂಬರ್ ತಿಂಗಳವರೆಗಿನ ಅನುದಾನ ನೀಡುವ ಸಂಬಂಧ ಬಜೆಟ್ ಬಿಡುಗಡೆ ಮಾಡಲಾಗಿದೆ. ತಾಂತ್ರಿಕ ಸಮಸ್ಯೆಯ ಕಾರಣ ಈವರೆಗೂ ಜಿಲ್ಲಾ ಕಚೇರಿಗೆ ಹಣ ಜಮೆ ಆಗಿಲ್ಲ. ಶೀಘ್ರದಲ್ಲಿಯೇ ಸಂಬಂಧಪಟ್ಟ ಕೇಂದ್ರಗಳ ಖಾತೆಗೆ ಹಣ ಜಮಾ ಮಾಡಲಾಗುವುದು.| ಪದ್ಮಾವತಿ ಜಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ
10 ತಿಂಗಳಿನಿಂದ ಸರ್ಕಾರದ ಅನುದಾನ ಬಂದಿಲ್ಲ. ಇದರಿಂದ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಸಮಸ್ಯೆ ಆಗುತ್ತಿದೆ. ತಕ್ಷಣ ಅನುದಾನ ಬಿಡುಗಡೆಗೆ ಕ್ರಮವಹಿಸಬೇಕು.| ಹೆಸರು ಹೇಳಲಿಚ್ಛಿಸದ ಸಿಬ್ಬಂದಿ