ಹಾಸನ: ಚನ್ನರಾಯಪಟ್ಟಣ ತಾಲೂಕಿನ ಹಳ್ಳಿಯೊಂದರಿಂದ ಕಳೆದ ನ.7 ರ ಸಂಜೆ ನಾಪತ್ತೆಯಾಗಿದ್ದ ಅಪ್ರಾಪ್ತ ವಯಸ್ಸಿನ 7ನೇ ತರಗತಿ ಬಾಲಕಿ ತುಮಕೂರಿನಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ಆಕೆಯನ್ನು ಕರೆತಂದು ವಿಚಾರಣೆ ನಡೆಸಿದ ನಂತರ, ಆಕೆ ನಾಪತ್ತೆ ಆಗುವ ಮುನ್ನ ಪರಿಚಯದ ಆಟೋ ಚಾಲಕನೊಬ್ಬ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನೀಡಿರುವ ವಿಚಾರ ಬೆಳಕಿಗೆ ಬಂದಿದೆ.
ಪೋಕ್ಸೋ ಕಾಯ್ದೆ ಅಡಿ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಡೆದಿದ್ದೇನು:
ಚನ್ನರಾಯಪಟ್ಟಣ ತಾಲೂಕು ಹಳ್ಳಿಯೊಂದರ ಸರ್ಕಾರಿ ಬಿಸಿಎಂ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಅದೇ ಊರಿನ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಬಾಲಕಿ ದಿಢೀರ್ ನಾಪತ್ತೆಯಾಗಿದ್ದಳು. ನ.7ರ ಸಂಜೆ ಆಕೆ ಸಾರಿಗೆ ಬಸ್ ಹತ್ತಿ ತುಮಕೂರಿಗೆ ತೆರಳಿದ್ದ ವಿಚಾರ ಆಕೆಯನ್ನು ಕರೆದುಕೊಂಡು ಬಂದು ವಿಚಾರಣೆ ನಡೆಸಿದ ನಂತರ ತಿಳಿದು ಬಂದಿದೆ.
ಆಕೆ ತುಮಕೂರಿಗೆ ಹೋಗುವಾಗ ಬಸ್‌ನಲ್ಲೇ ಮಹಿಳೆಯೊಬ್ಬರು ಪರಿಚಯ ಆದರು. ಆಕೆಯ ಎದುರು ಬಾಲಕಿಯು ‘ನನಗೆ ತಂದೆ ತಾಯಿ ಇಲ್ಲ’ ಎಂದು ಬಾಲಕಿ ಕಣ್ಣೀರಿಡುತ್ತಾ ತನ್ನ ಕಷ್ಟ ಹೇಳಿಕೊಂಡಿದ್ದಳು. ಜೊತೆಗೆ ಓದುವ ಇಂಗಿತವನ್ನೂ ವ್ಯಕ್ತಪಡಿಸಿದ್ದಳು. ಮನ ಕರಗಿದ ತುಮಕೂರು ಮಹಿಳೆ ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿ ಖಾಸಗಿ ಶಾಲೆಯೊಂದಕ್ಕೆ ದಾಖಲು ಸಹ ಮಾಡಿದ್ದರು. ಬಾಲಕಿ ಶಾಲೆಗೆ ಹೋಗಿ ಬರಲಾರಂಭಿಸಿದ್ದಳು. ತಮ್ಮ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಹೊಸ ಬಾಲಕಿಯನ್ನು ಕಂಡ ಸ್ಥಳೀಯರು, ಇದೇ ವೇಳೆ ಅನೇಕ ಸುದ್ದಿ ಮಾಧ್ಯಮಗಳಲ್ಲಿ ಬಾಲಕಿ ನಾಪತ್ತೆ ಸುದ್ದಿ ಪ್ರಕಟವಾಗಿದ್ದನ್ನು ಗಮನಿಸಿ ಅನುಮಾನಗೊಂಡು ನವಂಬರ್ 10 ಹಾಸನ ಜಿಲ್ಲಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಶುಕ್ರವಾರ ತುಮಕೂರಿಗೆ ತೆರಳಿ ಬಾಲಕಿಯನ್ನು ಸುರಕ್ಷಿತವಾಗಿ ಹಾಸನಕ್ಕೆ ಕರೆತರಲಾಗಿದೆ ಎಂದು ಎಸ್ಪಿ ಹರಿರಾಮ್ ಶಂಕರ್ ಮಾಹಿತಿ ನೀಡಿದರು.
ಲೈಂಗಿಕ ಕಿರುಕುಳದ ವಿಷಯ ಬಯಲು:
ಬಾಲಕಿ ನಾಪತ್ತೆ ಆಗುವ ಮುನ್ನ ಆಕೆ ಇದ್ದ ಊರಿನ ಆಟೋ ಚಾಲಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ವಿಷಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದಕ್ಕೂ ಮೊದಲು ಬಾಲಕಿ ನಾಪತ್ತೆ ಆಗಿದ್ದ ಸಂದರ್ಭದಲ್ಲಿ ಬಾಲಕಿಯ ಪೋಷಕರ ಅನುಮಾನದ ಮೇರೆಗೆ ಸದರಿ ಆಟೋ ಚಾಲಕನನ್ನು ಠಾಣೆಗೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ, ‘ನಾನೇನೂ ಮಾಡಿಲ್ಲ, ಆಕೆಯ ನಾಪತ್ತೆಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದು ಆರೋಪಿ ನುಣುಚಿಕೊಂಡಿದ್ದ.
ಸಹಾಯದ ನೆಪದಲ್ಲಿ ಕಿರುಕುಳ:
ಹೊರ ಊರುಗಳಲ್ಲಿ ಕ್ರೀಡಾ ಚಟುವಟಿಕೆ ಅಥವಾ ಇತರೆ ಕಾರ್ಯಕ್ರಮ ಇದ್ದಾಗ ಹಾಸ್ಟೆಲ್‌ನಿಂದ ಮಕ್ಕಳನ್ನು ಕರೆದೊಯ್ಯಲು ಆರೋಪಿಯ ಆಟೋ ಬಳಕೆ ಮಾಡಲಾಗುತ್ತಿತ್ತು. ಹೀಗಾಗಿ ಮಕ್ಕಳೊಂದಿಗೆ ಆರೋಪಿಗೆ ಸಲುಗೆ ಬೆಳೆದಿತ್ತು. ಕಳೆದ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ಹೊರ ಊರಿನಲ್ಲಿ ಕ್ರೀಡಾಕೂಟ ಇತ್ತು. ಅದರಲ್ಲಿ ಭಾಗವಹಿಸಿದ್ದ ಬಾಲಕಿಯ ಕಾಲಿಗೆ ಗಾಯ ಆಗಿತ್ತು. ಗಾಯಕ್ಕೆ ಔಷಧಿ ಹಾಕಿಸಿಕೊಂಡು ಬರುವ ನೆಪದಲ್ಲಿ ಬಾಲಕಿಯನ್ನು ಆಟೋದಲ್ಲಿ ಕರೆದೊಯ್ದ ಆಟೋ ಚಾಲಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ. ಇದರಿಂದ ಆಘಾತಕ್ಕೊಳಗಾದ ಬಾಲಕಿ ಹಾಸ್ಟೆಲ್ ಬಿಟ್ಟು ಬಸ್ ಹತ್ತಿ ತುಮಕೂರಿಗೆ ಹೋಗಿದ್ದಳು. ಈಗ ಬಾಲಕಿಯನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಆರೋಪಿ ಸಿಕ್ಕಿಬಿದ್ದಿದ್ದಾನೆ. ಆದರೆ ತಾಯಿ-ತಂದೆ ಇಲ್ಲದ ಬಾಲಕಿಯನ್ನು ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪರ್ದಿಗೆ ವಹಿಸಲಾಗಿದೆ.
‘‘ಬಾಲಕಿ ಸುರಕ್ಷಿತವಾಗಿದ್ದಾಳೆ. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಪರ್ದಿಗೆ ವಹಿಸಲಾಗಿದೆ. ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮುಂದೆ ಹಾಜರುಪಡಿಸಿ, ಸಮಿತಿಯ ನಿರ್ದೇಶನದ ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು.’’
-ಹರಿರಾಮ್ ಶಂಕರ್, ಎಸ್ಪಿ, ಹಾಸನ.