ಜಿಲ್ಲೆ

ಸಹಾಯ ಮಾಡುವುದೇ ಧರ್ಮ

ಮುಂಡರಗಿ: ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ನಿಜವಾದ ಧರ್ಮ. ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕೆಲಸ ಮಾಡುವುದೇ ನಮ್ಮ ದೇಶದ ಸಂಸ್ಕೃತಿ, ಸಂಸ್ಕಾರವಾಗಿದೆ. ಮುಂಡರಗಿ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಅವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಎಲ್ಲ ಮನೆಗಳಿಗೆ ಆಹಾರ ಧಾನ್ಯ, ತರಕಾರಿ ಕಿಟ್​ಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ತಾಲೂಕಿನ ಡಂಬಳ ಗ್ರಾಮದಲ್ಲಿ ಮಂಗಳವಾರ ಮಾಜಿ ಸಚಿವ ಎಸ್.ಎಸ್. ಪಾಟೀಲ ಅಭಿಮಾನಿ ಬಳಗದ ವತಿಯಿಂದ ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ನೇತೃತ್ವದಲ್ಲಿ 1.80 ಕೋಟಿ ರೂ.ವೆಚ್ಚದಲ್ಲಿ ತಾಲೂಕಿನ ಎಲ್ಲ ಮನೆಗಳಿಗೆ ಆಹಾರ ಧಾನ್ಯ ಮತ್ತು ತರಕಾರಿ ಕಿಟ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಶಾಸಕ ಎಚ್.ಕೆ. ಪಾಟೀಲ ಮಾತನಾಡಿ, ದಾಸೋಹದ ಪರಿಕಲ್ಪನೆಯಲ್ಲಿ ಶಿವಕುಮಾರಗೌಡ ಅವರು ಆಹಾರ ಧಾನ್ಯ ಮತ್ತು ತರಕಾರಿ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಬದುಕು ಸಂತೋಷಮಯವಾಗಲು ಸಂಪೂರ್ಣವಾಗಿ ಮದ್ಯ ನಿಷೇಧವಾಗಬೇಕು ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ರಾಜ್ಯ ಸೇರಿ ದೇಶಾದ್ಯಂತ ಮದ್ಯವನ್ನು ನಿಷೇಧಿಸಬೇಕು. ಮೊದಲು ಜನರು ಮದ್ಯ ಸೇವನೆ ನಿಲ್ಲಿಸಬೇಕು. ಮಹಿಳೆಯರು ಮದ್ಯಕ್ಕಾಗಿ ಮದ್ಯದಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ನೋವಿನ ಸಂಗತಿ ಎಂದರು.

ಎಪಿಎಂಸಿ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ತಾಲೂಕಿನ ಒಟ್ಟು 30 ಸಾವಿರ ಮನೆಗಳಿಗೆ ಆಹಾರ ಧಾನ್ಯ, ತರಕಾರಿ ಕಿಟ್ ವಿತರಿಸುತ್ತಿದ್ದೇವೆ. ಪ್ರತಿದಿನ 4ರಿಂದ 5 ಸಾವಿರ ಮನೆಗಳಿಗೆ ವಿತರಿಸಲಾಗುತ್ತದೆ. ಗಂಗಮ್ಮ ಎಸ್. ಪಾಟೀಲ ಮೆಮೋರಿಯಲ್, ಸುಶೀಲಮ್ಮ ಎಸ್. ಪಾಟೀಲ ಮೆಮೋರಿಯಲ್ ವತಿಯಿಂದ 108 ಆಶಾ ಕಾರ್ಯಕರ್ತೆಯರಿಗೆ ತಲಾ 1ಸಾವಿರ ರೂ. ಪ್ರೋತ್ಸಾಹ ಧನ ನೀಡುತ್ತೇವೆ. 2500 ಲೀಟರ್ ಸ್ಯಾನಿಟೈಸರ್ ಅನ್ನು ಈಗಾಗಲೇ ಅನೇಕ ಕಡೆಗಳಲ್ಲಿ ವಿತರಿಸಲಾಗಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗದಗ ನಗರಸಭೆಗೆ 400 ಲೀಟರ್ ಹಾಗೂ ಮುಳಗುಂದಕ್ಕೆ 100 ಲೀಟರ್ ಸ್ಯಾನಿಟೈಸರ್ ಹಾಗೂ ಆಶಾಕಾರ್ಯಕರ್ತೆಯರಿಗೆ ತಲಾ 1ಸಾವಿರ ರೂ.ಚೆಕ್ ವಿತರಿಸಲಾಯಿತು. ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ಜಿ.ಎಸ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಜಿ.ಎಸ್. ಗಡ್ಡದೇವರಮಠ, ಜಿ.ಪಂ. ಅಧ್ಯಕ್ಷ ಸಿದ್ಧಲಿಂಗೇಶ ಪಾಟೀಲ, ಟಿ. ಈಶ್ವರ, ಶೇಖಣ್ಣ ಬಡ್ನಿ, ಲಿಂಗರಾಜಗೌಡ ಪಾಟೀಲ, ಗಂಗಣ್ಣ ಸೊರಟೂರ, ವಿ.ಸಿ. ಯರಾಶಿ, ಮಂಜುನಾಥಗೌಡ ಪಾಟೀಲ, ಬಸವರಾಜ ಗಂಗಾವತಿ, ರಾಮಚಂದ್ರ ಕಲಾಲ, ಗೋಣಿಬಸಪ್ಪ ಕೊರ್ಲಹಳ್ಳಿ, ಕೊಟ್ರೇಶ ಅಂಗಡಿ ಇತರರಿದ್ದರು.

ಲಾಕ್​ಡೌನ್ ಸಂದರ್ಭದಲ್ಲಿ ಮದ್ಯದ ಅಂಗಡಿಗಳು ಬಂದ್ ಆಗಿದ್ದರಿಂದ ಸಮಾಜದಲ್ಲಿ ಶಾಂತಿ ನೆಲೆಸಿತ್ತು. ಆದರೆ, ಈಗ ಅಂಗಡಿ ಪ್ರಾರಂಭಿಸಿದ್ದರಿಂದ ಮದ್ಯವ್ಯಸನಿಗಳು ಹೆಚ್ಚಾಗಿ ಸಮಾಜದ ನೆಮ್ಮದಿ ಕೆಡಿಸುವಂತಹ ಕೆಲಸ ನಡೆಯುತ್ತಿದೆ. ಸರ್ಕಾರ ಮದ್ಯ ಮಾರಾಟವನ್ನು ತಕ್ಷಣ ನಿಲ್ಲಿಸಬೇಕು. | ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

ಬಡವರ ಸಂಕಷ್ಟಕ್ಕೆ ಸ್ಪಂದಿಸಿ

ಗದಗ: ಕರೊನಾ ವೈರಸ್ ಹರಡುವಿಕೆ ಹೇರಲಾಗಿರುವ ಲಾಕ್​ಡೌನ್​ದಿಂದ ಜನರು ಸಂಕಷ್ಟದಲ್ಲಿದ್ದಾರೆ. ಉಳ್ಳವರು ಬಡವರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮನವಿ ಮಾಡಿದರು.

ನಗರದ ಎಪಿಎಂಸಿ ಯಾರ್ಡ್​ನಲ್ಲಿ ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆಯೋಜಿಸಿದ್ದ ದಿನಸಿ ಸಾಮಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕರೊನಾ ಮಹಾಮಾರಿಗೆ ಜನರು ಹೆದರುವ ಅವಶ್ಯವಿಲ್ಲ. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಗಡೆ ಬರಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ‘ಜನರ ಸಂಕಷ್ಟವನ್ನು ಅರಿತ ಸಮಾಜ ಒಳ್ಳೆಯ ಕಾರ್ಯ ಮಾಡುವುದು ಸಂತೋಷ ತಂದಿದೆ. ಇದೇ ರೀತಿ ಎಲ್ಲ ಸಮಾಜ ಮುಖಂಡರು ಸಮಸ್ಯೆಗೆ ಸ್ಪಂದಿಸಬೇಕು’ ಎಂದು ಮನವಿ ಮಾಡಿದರು. ಸಂಘದ ಜಿಲ್ಲಾಧ್ಯಕ್ಷ ಈಶಣ್ಣ ಮುನವಳ್ಳಿ ಮಾತನಾಡಿ, ತಾಲೂಕಿನ ಗ್ರಾಮೀಣ ಭಾಗದ ಕಡುಬಡವರ ಸಂಕಷ್ಟಕ್ಕೆ ಸ್ಪಂದಿಸಲು ಸಮಾಜ ಸದಾ ಸಿದ್ಧವಿದೆ ಎಂದರು.

ನಾಗೇಶ ಸವಡಿ, ಸುರೇಶ ನಿಲೂಗಲ್, ಅನಿಲ ಮೆಣಸಿನಕಾಯಿ, ಬಿ.ಬಿ. ಅಸೂಟಿ, ರಾಜು ಕುರಡಗಿ, ಬಸವರಾಜ ರಾಮನಕೊಪ್ಪ, ಸಂಗಮೇಶ ದುಂದೂರ, ರೇವಣಸಿದ್ದಪ್ಪ ಯಳಮಲಿ, ವಿರೂಪಾಕ್ಷಪ್ಪ ಅಕ್ಕಿ, ಈರಣ್ಣ ಹುಲಬನ್ನಿ, ಅಂದಪ್ಪ ಪಟ್ಟಣಶೆಟ್ಟಿ, ಸಂತೋಷ ಮೇಲಗಿರಿ, ರಾಜು ಉಮನಾಬಾದಿ, ಕೆ.ಎಂ. ಪಟ್ಟಣಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಠದಿಂದ ಆಹಾರ ಧಾನ್ಯ ವಿತರಣೆ

ಮುಂಡರಗಿ: ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಸಂಸ್ಥಾನಮಠದ ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಅವರ 79ನೇ ಜನ್ಮ ದಿನೋತ್ಸವ ನಿಮಿತ್ತ, ಸೋಮವಾರ ಪುರಸಭೆ ಪೌರಕಾರ್ವಿುಕ ಸಿಬ್ಬಂದಿ ಹಾಗೂ ತಾಲೂಕು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಶ್ರೀಮಠದ ಉತ್ತರಾಧಿಕಾರಿ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಅವರು 200 ಆಹಾರ ಧಾನ್ಯ ಹಾಗೂ ದಿನ ಬಳಕೆ ವಸ್ತುಗಳ ಕಿಟ್ ವಿತರಿಸಿದರು.

ಶ್ರೀಮಠದಲ್ಲಿ ಭಕ್ತರಿಗೆ ಹುಗ್ಗಿ, ಅನ್ನ ಸಂತರ್ಪಣೆ ನೆರವೇರಿಸಲಾಯಿತು. ಶ್ರೀಚನ್ನವೀರ ಸ್ವಾಮೀಜಿ, ಶ್ರೀಶಿವಬಸವ ಸ್ವಾಮೀಜಿ, ಶ್ರೀಚನ್ನಬಸವ ದೇವರು, ಶ್ರೀ ಶಿವಾನಂದ ದೇವರು, ಶ್ರೀ ಅನ್ನದಾನಿ ದೇವರು, ಶ್ರೀ ಶಶಿಕುಮಾರ ದೇವರು, ಶ್ರೀ ರೇಣುಕ ದೇವರು, ಶ್ರೀ ಮೃತ್ಯುಂಜಯ ದೇವರು, ಕರಬಸಪ್ಪ ಹಂಚಿನಾಳ, ಎಂ.ಎಸ್. ಶಿವಶೆಟ್ಟರ್, ಬಿ.ಜಿ. ಜವಳಿ, ಡಾ.ಕುಮಾರಸ್ವಾಮಿ ಹಿರೇಮಠ, ಎಂ.ಎಸ್. ಹೊಸಮನಿ, ಎಸ್.ವಿ. ಲಿಂಬಿಕಾಯಿ, ಅಂದಪ್ಪ ಗೋಡಿ, ವೀರೇಶ ಸಜ್ಜನರ, ಕೈಲಾಸ ಹಿರೇಮಠ, ಪುರಸಭೆ ಸದಸ್ಯರು ಇದ್ದರು.

ಬೆಂಬಲ ಬೆಲೆಗೆ ಆಗ್ರಹ

ಗದಗ: ಸರ್ಕಾರವು ಬೆಂಬಲ ಬೆಲೆಯಲ್ಲಿ ಉಳ್ಳಾಗಡ್ಡಿ ಖರೀದಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿ ರಾಜ್ಯ ಉಳ್ಳಾಗಡ್ಡಿ ಬೆಳೆಗಾರರ ಸಂಘದ ಪದಾಧಿಕಾರಿಗಳು ಮಂಗಳವಾರ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕೋವಿಡ್ 19 ಮಹಾಮಾರಿಯಿಂದಾಗಿ ಜಾರಿಗೊಳಿಸಲಾದ ಲಾಕ್​ಡೌನ್​ನಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ರೈತರು ಬೆಳೆದ ಉಳ್ಳಾಗಡ್ಡಿಯನ್ನು ವ್ಯಾಪಾರಸ್ಥರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ. ಹೀಗಾಗಿ, ಲಕ್ಷಾಂತರ ರೂ. ಸಾಲ ಮಾಡಿಕೊಂಡು ಬೆಳೆ ಬೆಳೆದ ರೈತರು ಕೈಸುಟ್ಟುಕೊಂಡಿದ್ದಾರೆ. ಸರ್ಕಾರ ಕೈಹಿಡಿಯದಿದ್ದರೆ ರೈತರು ಜೀವನ ನಡೆಸುವುದು ಕಷ್ಟವಾಗುತ್ತದೆ. ಆದ್ದರಿಂದ ರೈತರ ಬಳಿ ಇರುವ ಉಳ್ಳಾಗಡ್ಡಿಯನ್ನು ಸರ್ಕಾರ ಖರೀದಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಘದ ರಾಜ್ಯ ಕಾರ್ಯದರ್ಶಿ ವಿಠ್ಠಲ ಗಣಾಚಾರಿ, ಭರಮಪ್ಪ ಬೀರಪ್ಪ ಉಂಡಾಡಿ, ಮಾರುತೆಪ್ಪ ದಳವಾಯಿ, ಶಂಕರಗೌಡ ಪಾಟೀಲ, ಬಸವರಾಜ ಲಿಂಗಶೆಟ್ಟರ, ಯಲ್ಲಪ್ಪ ಮುದೇನೂರ, ಬಸಪ್ಪ ಶೀರನಹಳ್ಳಿ, ಹನುಮಂತ ದೊಡ್ಡಮನಿ, ಶೇಖಪ್ಪ ಮುಳ್ಳಿನ, ಮರಿಯಪ್ಪ ಮೂಂಗಣ್ಣವರ, ತಿಪ್ಪಣ್ಣ ವಾಲಿಕಾರ, ಹನುಮಂತಪ್ಪ, ಎಲ್.ಆರ್.ಕಂಗನೂರ ಉಪಸ್ಥಿತರಿದ್ದರು.