ಶೃಂಗೇರಿ: ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿ ಅವರ 75ನೇ ವರ್ಧಂತಿ ಮಹೋತ್ಸವ ಅಂಗವಾಗಿ ಶುಕ್ರವಾರ ಶ್ರೀಮಠದಲ್ಲಿ ಸಹಸ್ರಚಂಡಿಯಾಗದ ಪೂರ್ಣಾಹುತಿ ನೆರವೇರಿತು. ಉಭಯ ಜಗದ್ಗುರುಗಳು ಪೂರ್ಣಾಹುತಿಯಲ್ಲಿ ಭಾಗಿಯಾದರು. ಮಾ.31ರಂದು ಸಹಸ್ರಚಂಡಿಯಾಗದ ಸಂಕಲ್ಪ ಮಾಡಲಾಗಿತ್ತು.
ಶ್ರೀ ಮಹಾವಿಷ್ಣು ಆರಾಧನಾ ಪ್ರಯುಕ್ತ ನರಸಿಂಹವನದ ಶ್ರೀ ಭಾರತೀತೀರ್ಥನಗರದಲ್ಲಿ ಶ್ರೀ ಲಕ್ಷ್ಮೀನಾರಾಯಣ ಪಂಚಶಾಸ್ತ್ರ ಪಾರಾಯಣ, ಶ್ರೀನರಸಿಂಹ, ಶ್ರೀರಾಮ, ಶ್ರೀಕೃಷ್ಣ, ಶ್ರೀಹಯಗ್ರೀವ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಧಾರ್ಮಿಕ ಕಾರ್ಯಕ್ರಮ ಏ.8ರ ತನಕ ಜರುಗಲಿದೆ. ಈಗಾಗಲೇ ಪ್ರಾರಂಭಗೊಂಡ ಸೂರ್ಯ ನಮಸ್ಕಾರ ಅನುಷ್ಠಾನ, ದೇವಿಮಹಾಮಂತ್ರ ಜಪ, ಅಕ್ಷರ ಲಕ್ಷ ಶ್ರೀವಿದ್ಯಾ ಜಪ ಅನುಷ್ಠಾನ ನಡೆಯುತ್ತದೆ.
ಮಠದ ಆವರಣದಲ್ಲಿ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ವಿಕಲಾಂಗರಿಗೆ ಕಮೋಡ್ ವ್ಹೀಲ್ ಚೇರ್, ಶ್ರವಣಯಂತ್ರ, ಅಕ್ಸಿಲರಿ ಕ್ರಷಸ್, ಕಮೋಡ್ ಚೇರ್‌ಗಳು, ವಾಕರ್ ಇತ್ಯಾದಿ ಪರಿಕರಗಳನ್ನು ವಿತರಿಸಲಾಯಿತು.
ಐವತ್ತು ವಿದ್ಯುತ್ ಮೋಟಾರ್ ಸಹಿತ ಹೊಲಿಗೆ ಯಂತ್ರ ಹಾಗೂ ನೂರು ಸೀರೆಗಳನ್ನು ಮಹಿಳೆಯರಿಗೆ ವಿತರಿಸಲಾಯಿತು. ಆಡಳಿತಾಧಿಕಾರಿ ಪಿ.ಎ.ಮುರಳಿ, ಜಗದ್ಗುರುಗಳ ಆಪ್ತಸಹಾಯಕರಾದ ಕೃಷ್ಣಮೂರ್ತಿ, ಶಮಂತ್ ಶರ್ಮ ಇದ್ದರು.