ಚಿತ್ರದುರ್ಗ: ಸಂತ ಶಿಶುನಾಶ ಷರೀಫರು ಸಹಬಾಳ್ವೆ, ಸೌಹಾರ್ದತೆ ಸಂದೇಶವನ್ನು ಸಮಾಜಕ್ಕೆ ಸಾರಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ. ಶಿವಸ್ವಾಮಿ ಹೇಳಿದರು.
ಕರ್ನಾಟಕ ಮುಸ್ಲಿಂ ಕಲ್ಚರಲ್ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹೊರಪೇಟೆ ಸರ್ಕಾರಿ ಉರ್ದು ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಸಂತ ಶಿಶುನಾಳ ಷರೀಫರ ತತ್ವಪದಗಳ ಗಾಯನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗುರುಗೋವಿಂದಭಟ್ಟರ ಶಿಷ್ಯರಾಗಿದ್ದ ಷರೀಫರು ಹಿಂದು-ಮುಸ್ಲಿಮರು ಸಹೋದರತ್ವದಿಂದ ಬಾಳಬೇಕು. ಎಲ್ಲೂ ಜಾತಿ, ಧರ್ಮದ ತಾರತಮ್ಯ ಇರಬಾರದು ಎಂಬ ಆಶಯ ಹೊಂದಿದ್ದರು. ಅದು ಅವರ ತತ್ವವೂ ಆಗಿತ್ತು. ವಿದ್ಯಾರ್ಥಿಗಳಿಗೆ ಷರೀಫರ ತತ್ವ, ಸಿದ್ಧಾಂತಗಳನ್ನು ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಗೌರವಾಧ್ಯಕ್ಷ ಬಿ.ಕೆ. ರಹಮತ್‌ವುಲ್ಲಾ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ಜಾತಿ,ಧರ್ಮದವರಿಗೆ ಸಮಾನ ಹಕ್ಕು ಕೊಟ್ಟಿದ್ದಾರೆ. ಷರೀಫರು ಜಾತಿ, ಪಂಥ, ಧರ್ಮ, ಭಾಷೆ ಮೀರಿ ಸಂತರೆನಿಸಿಕೊಂಡಿದ್ದಾರೆ ಎಂದರು.
ಚಿಂತಕ ಪ್ರೊ.ಜೆ. ಯಾದವರೆಡ್ಡಿ, ಕುಡಾ ಅಧ್ಯಕ್ಷ ಎಂ.ಕೆ. ತಾಜ್‌ಪೀರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ. ದೊಡ್ಡ ಮಲ್ಲಯ್ಯ, ಲೋಕಾಯುಕ್ತ ಅಭಿಯೋಜಕ ಮಲ್ಲೇಶಪ್ಪ, ಕರ್ನಾಟಕ ಶಾಂತಿ ಮತ್ತು ಸೌಹಾರ್ದ ವೇದಿಕೆ ಅಧ್ಯಕ್ಷ ನರೇನಹಳ್ಳಿ ಅರುಣ್ ಕುಮಾರ್ ಮಾತನಾಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಸೈಯದ್ ಜಿಯಾವುಲ್ಲಾ, ಮುಖ್ಯ ಶಿಕ್ಷಕಿ ಮೆಹರುನ್ನಿಸಾ, ಅಕಾಡೆಮಿ ಅಧ್ಯಕ್ಷ ಎಂ. ಹನೀಫ್, ಉಪಾಧ್ಯಕ್ಷ ಸೈಯದ್ ತಬ್ರೇಜ್ ಹಾಶ್ಮಿ, ಕಾರ್ಯಾಧ್ಯಕ್ಷ ನವೀದ್ ಅಬ್ದುಲ್ಲಾ ಇದ್ದರು. ಡಿ. ಕುಮಾರ್ ತಂಡದವರು ಹಾಗೂ ಚನ್ನಬಸಪ್ಪ ಷರೀಫರ ತತ್ವಪದಗಳನ್ನು ಹಾಡಿದರು.