ಭಾಲ್ಕಿ: ಶಿಕ್ಷಕರು ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹಾಕಲು ಸಹಪಠ್ಯ ಚಟುವಟಿಕೆ ಉತ್ತಮ ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಲಕ್ಷ್ಮೀ ಭೀಮಾಶಂಕರ ಹೇಳಿದರು.
ಕಲವಾಡಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಿಂದ ಸೋಮವಾರ ಏರ್ಪಡಿಸಿದ್ದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಲ್ಲಿ ಉತ್ತಮ ಪ್ರತಿಭೆ ಅಡಗಿದೆ. ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಇಂತಹ ಸಹ ಪಠ್ಯ ಚಟುವಟಿಕೆಯ ವೇದಿಕೆಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಶಿಕ್ಷಕರ ಸಹಪಠ್ಯ ಚಟುವಟಿಕೆಯ ನೋಡಲ್ ಅಧಿಕಾರಿ ಸಹದೇವ ಜಿ. ಪ್ರಾಸ್ತಾವಿಕ ಮಾತನಾಡಿ, ಈ ಹಿಂದೆಯೂ ನಮ್ಮ ತಾಲೂಕಿನ ಹಲವಾರು ಶಿಕ್ಷಕರು ರಾಜ್ಯಮಟ್ಟದಲ್ಲಿ ಉತ್ತಮ ಪ್ರತಿಭೆ ತೋರಿಸಿದ್ದಾರೆ. ತಾಲೂಕು ಮಟ್ಟದಲ್ಲಿ ಪ್ರಥಮಸ್ಥಾನ ಪಡೆದ ಶಿಕ್ಷಕರನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದ ಶಿಕ್ಷಕರು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುತ್ತಾರೆ. ಹೀಗಾಗಿ ನಿರ್ಣಾಯಕರು ಯಾವುದೇ ತಾರತಮ್ಯ ಮಾಡದೆ ಉತ್ತಮ ಪ್ರತಿಭೆ ಇರುವ ಶಿಕ್ಷಕರನ್ನು ಆಯ್ಕೆಮಾಡಬೇಕು ಎಂದು ಕಿವಿಮಾತು ಹೇಳಿದರು.
ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ ಮಾತನಾಡಿದರು.
ಸರ್ಕಾರಿ ನೌಕರರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ನಿದೇರ್ಶಕರಾದ ದಿಲೀಪಕುಮಾರ ಬಿರಾದಾರ, ಬಸವರಾಜ ದಾನಾ, ಶಿವಕುಮಾರ ಫುಲಾರಿ, ನಿರಂಜಪ್ಪ ಪಾತ್ರೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇಸಿಒ ಮಲ್ಲಿಕಾರ್ಜುನ ಕನ್ನಾಳೆ, ಮುಖ್ಯಶಿಕ್ಷಕ ಕಿರಣಕುಮಾರ ಭಾಟಸಾಂಗವಿ, ನಿವೃತ್ತ ಮುಖ್ಯಶಿಕ್ಷಕ ಜಯರಾಜ ದಾಬಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ತಾಂಬೋಳೆ, ಬಿಆರ್‌ಪಿ ಚೇತನಾ ಚನಶೆಟ್ಟಿ, ಸಿಆರ್‌ಪಿ ಸಂತೋಷ ಡಿ., ಸುಧಾ ಇತರರಿದ್ದರು. ಸಹದೇವ ಸ್ವಾಗತಿಸಿದರು. ಶಿಕ್ಷಕಿ ಸುಧಾರಾಣಿ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ.ಕೆ ವಂದಿಸಿದರು.