ಸಂಕೇಶ್ವರ: ದೇಶದ ಅಭಿವೃದ್ಧಿಗೆ ರೈತರ ಕೊಡುಗೆ ಅಪಾರವಾಗಿದೆ. ಪ್ರತಿಯೊಂದು ಕ್ಷೇತ್ರದ ಪ್ರಗತಿಗೂ ರೈತನೇ ಪ್ರಮುಖ ಪಾಲುದಾರ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ಸಮೀಪದ ಆಲೂರ ಕೆ.ಎಂ.ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ 52 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಪ್ರಾಥಮಿಕ ಕೃಷಿ ಸಹಕಾರ ಸಂಘದ ಉಗ್ರಾಣ ಹಾಗೂ ರೈತ ಸೇವಾ ಕೇಂದ್ರ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರೈತರ ಏಳಿಗೆಗೆ ಬೆಂಗಾವಲಾಗಿ ಕೃಷಿ ಸಹಕಾರಿ ಸಂಘಗಳು ನಿಂತಿವೆ. ಕೃಷಿ ಸಹಕಾರಿ ಸಂಘದಿಂದ ರೈತರ ಅಭಿವೃದ್ಧಿ ಜತೆಗೆ ಗ್ರಾಮಗಳು ಸುಧಾರಣೆಯೂ ಸಾಧ್ಯವಾಗಿದೆ. ಹಿರಿಯರ ದೂರದೃಷ್ಟಿಯಿಂದ ನಿರ್ಮಾಣವಾದ ಗ್ರಾಮದ ಸಹಕಾರಿ ಸಂಘವು ಲಾಭದಲ್ಲಿ ಮುನ್ನಡೆಯುತ್ತಿವೆ ಎಂದರು.
ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, 80 ವರ್ಷಗಳ ಹಿಂದೆ ಪ್ರಾರಂಭಗೊಂಡ ಸಹಕಾರಿ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿರುವುದು ಸಂತಸ. ಸಂಘದಲ್ಲಿ ನೀಡುವ ಸಾಲ, ಸೌಲಭ್ಯಗಳ ಸದುಪಯೋಗದೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಹೇಳಿದರು.
ತೇರದಾಳ-ನಾವಲಗಿ ಹಿರೇಮಠದ ಗಂಗಾಧರ ಸ್ವಾಮೀಜಿ ಮಾತನಾಡಿ, ಪಾರದರ್ಶಕ ಆಡಳಿತದ ಮುಖಾಂತರ ಜನಮನ್ನಣೆ ಗಳಿಸಿರುವ ಆಲೂರು ಪಿಕೆಪಿಎಸ್ ರೈತಸ್ನೇಹಿ ಸಂಸ್ಥೆಯಾಗಿ ಹೊರಹೊಮ್ಮಿದೆ. ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಗತಿ ಹೊಂದಲಿ ಎಂದು ತಿಳಿಸಿದರು.
ಪಿಕೆಪಿಎಸ್ ಮಾಜಿ ಅಧ್ಯಕ್ಷ ಮಹಾಲಿಂಗ ಮಗದುಮ್ಮ ಮಾತನಾಡಿ, ಸಂಸ್ಥೆ ಪ್ರಗತಿಯಲ್ಲಿ ಪಾಲುದಾರರಾಗಿರುವ ಸಂಘದ ಎಲ್ಲ ಸದಸ್ಯರು ಹಾಗೂ ರೈತರಿಗೆ ಕೃತಜ್ಞರಾಗಿದ್ದೇವೆ. ಸುಸಜ್ಜಿತ ಕಟ್ಟಡದ ಮೂಲಕ ರೈತರಿಗೆ ಹೆಚ್ಚಿನ ಅನುಕೂಲ ಒದಗಿಸಲಾಗುವುದು ಎಂದು ನುಡಿದರು.
ಸಂಗಮ ಶುಗರ್ ಕಾರ್ಖಾನೆ ಅಧ್ಯಕ್ಷ ರಾಜೇಂದ್ರ ಪಾಟೀಲ, ಕೇಸ್ತಿ ಗ್ರಾಪಂ ಅಧ್ಯಕ್ಷೆ ಪ್ರೇಮಾ ಘಸ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಮಹಾದೇವ ಜಿನರಾಳೆ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದುರದುಂಡಿ ಪಾಟೀಲ, ನಿರ್ದೇಶಕ ಶಂಕರ ಗೋಟೂರಿ, ಪ್ರಶಾಂತ ಪಾಟೀಲ, ವೀರಗೌಡ ಪಾಟೀಲ, ಬಸವಣ್ಣಿ ಖಾನಾಪೂರೆ, ಕಾಶಪ್ಪ ಸನದಿ, ಮಹಾದೇವ ಮಗದುಮ್ಮ, ಪರಸಗೌಡ ಪಾಟೀಲ, ಮಲ್ಲಪ್ಪ ಶೆಟ್ಟೆನ್ನವರ, ರಾಮಪ್ಪ ಚೌಗಲಾ, ಪಿಕೆಪಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಘಸ್ತಿ, ಉಪಾಧ್ಯಕ್ಷ ಮಹಾದೇವಿ ಚೌಗಲಾ, ನಿರ್ದೇಶಕರಾದ ಶಿವಾಜಿ ಸನದಿ, ಲಗಮಣ್ಣ ಬೆಳವಿ, ರವೀಂದ್ರ ಕುಟೋಳಿ, ಬಸವರಾಜ ಬೋರಗಲ್ಲಿ, ಮೈನುದ್ಧಿನ್ ಸನದಿ, ಸದಾಶಿವ ಸಂಕಪ್ಪಗೋಳ, ಮಲ್ಲಿಕಾರ್ಜುನ ಮಗದುಮ್ಮ, ರಾಣಿ ಕಳಾವಂತ, ಬ್ಯಾಂಕ್ ನಿರೀಕ್ಷಿಕ ರಾಜು ಮುನ್ನೋಳಿ, ಮುಖ್ಯಕಾರ್ಯನಿರ್ವಾಹಕ ಮಾರುತಿ ಮಾದಿಗರ ಇತರರು ಇದ್ದರು. ವಿರೂಪಾಕ್ಷಿ ಮಗದುಮ್ಮ ಸ್ವಾಗತಿಸಿದರು. ಭರಮಣ್ಣ ಶೆಟ್ಟೆನ್ನವರ ವಂದಿಸಿದರು.