ಸಾಗರ: ಮಾನವ ಸಂಪನ್ಮೂಲದ ಬಳಕೆ ವ್ಯವಸ್ಥಿತವಾಗಿ ಆಗಬೇಕು. ಯುವಜನರು ಶ್ರಮಕ್ಕೆ ಹೊಂದಿಕೊಳ್ಳುವ ಕೆಲಸಗಳಲ್ಲಿ ತೊಡಗಿಕೊಳ್ಳಬೇಕು. ದೇಶದಲ್ಲಿ ಸಹಕಾರಿ ಸಂಘಟನೆಗಳು ತಮ್ಮ ನಿಜವಾದ ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಅವುಗಳಿಗೆ ಜೀವ ತುಂಬುವ ಕೆಲಸವಾಗಬೇಕು ಎಂದು ಮುನಿಸ್ವಾಮಪ್ಪ ಮುನಿವೆಂಕಟಮ್ಮ ಚಾರಿಟಬಲ್ ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ಎಂ.ಸಿ.ನಾಗೇಂದ್ರ ಬೆಂಗಳೂರು ಹೇಳಿದರು.
ಸಮೀಪದ ಭೀಮನಕೋಣೆಯಲ್ಲಿ ಭಾನುವಾರ ಸಂಜೆ ಚರಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ‘ಕಾಯಕ ಪ್ರಶಸ್ತಿ’ ವಿತರಿಸಿ ಮಾತನಾಡಿ, ಸಹಕಾರಿ ಸಂಸ್ಥೆಗಳು ಗ್ರಾಮೀಣ ಪ್ರದೇಶದ ಉತ್ಪನ್ನಗಳನ್ನು ಉಳಿಸುವ ಮತ್ತು ಅವುಗಳಿಗೆ ಮಾರುಕಟ್ಟೆ ನಿರ್ವಿುಸಿಕೊಡುವ ಕೆಲಸ ಮಾಡಬೇಕು. ಯಾರದ್ದೋ ಹಿಡಿತದಲ್ಲಿ ಈ ಸಂಘಟನೆಗಳು ನಡೆಯುತ್ತಿವೆ. ಯುವಜನರು ಸಹಕಾರಿ ಚಳವಳಿಗಳಲ್ಲಿ ತೊಡಗಿಕೊಳ್ಳಬೇಕು ಎಂದರು.
ನಾವು ಬೆಳೆದ ಬೆಳೆ, ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ನಿರ್ವಿುಸಿಕೊಳ್ಳುವ ಬಹುಮುಖೀ ಚಿಂತನೆಯನ್ನು ಮಾಡದೆ ದಲ್ಲಾಳಿಗಳಿಗೆ ಕಾಯುತ್ತೇವೆ. ಇದರಿಂದಲೇ ವ್ಯಾಪಾರದಲ್ಲಿ ಸೋಲು ಆರಂಭವಾಗುತ್ತದೆ. ಶ್ರೀಮಂತರು ಶ್ರೀಮಂತರಾಗಿಯೇ ಇರುತ್ತಾರೆ, ಬಡವರು ಬಡವರಾಗಿಯೇ ಬದುಕುತ್ತಾರೆ. ನಾವು ಕೆಲಸ ಮಾಡುವುದರಲ್ಲಿ ಮಾತ್ರ ಸ್ಥಿತಪ್ರಜ್ಞರಾಗಿರುತ್ತೇವೆ ಮತ್ತು ತುಂಬ ಸೌಖ್ಯವಾಗಿ ಬದುಕುತ್ತಿದ್ದೇವೆ ಎಂದುಕೊಳ್ಳುವ ಭ್ರಮೆ ನಮ್ಮನ್ನು ಶಾಂತವಾಗಿಡುತ್ತದೆ. ಅದರಿಂದ ಹೊರಬರುವ ಕೆಲಸವಾಗಬೇಕು. ಐದು ಜನ ಸೇರಿ ಐಟಿ-ಬಿಟಿ ಕಂಪೆನಿ ಆರಂಭಿಸುತ್ತಾರೆ ಅದು ಯಶಸ್ವಿಯಾಗಿ ನಡೆಯುತ್ತದೆ. ಅದು ನಮ್ಮ ಉತ್ಪನ್ನಗಳಲ್ಲಿ ಏಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿಕೊಳ್ಳೋಣ. ಇದಕ್ಕೆ ಮಾರುಕಟ್ಟೆಯ ಗುಣ, ವಾಣಿಜ್ಯೀಕರಣದ ಚಿಂತನೆ ಬಹುಮುಖ್ಯ ಎಂದರು.
ಕಾಯಕ ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಡಿ.ಬಿ.ರುದ್ರಪ್ಪ, ಕಳೆದ 22 ವರ್ಷಗಳಿಂದ ನಾನು ಚರಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನೈಸರ್ಗಿಕ ಬಣ್ಣ ವಿಭಾಗದಲ್ಲಿಯೂ ಕೆಲಸ ನಿರ್ವಹಿಸಿದ್ದೇನೆ. ನನಗೆ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ನಮ್ಮ ನೇಕಾರರು ಸಮಸ್ಯೆಗೊಳಗಾದಾಗ ಅವರಿಗಾಗಿ ಆಪತ್ನಿಧಿಯೊಂದು ಸ್ಥಾಪಿತವಾಗಬೇಕು. ಇದಕ್ಕೆ ಪ್ರಥಮವಾಗಿ ನನಗೆ ನೀಡಿರುವ ಪ್ರಶಸ್ತಿಯ ಮೊತ್ತವನ್ನೇ ನೀಡುತ್ತಿದ್ದೇನೆ ಎಂದು ಅದನ್ನು ಸಭೆಯಲ್ಲಿ ಆಪತ್ನಿಧಿಗಾಗಿ ನೀಡಿದರು.
ಒಟ್ಟು ಆರು ಶ್ರಮಜೀವಿಗಳಿಗೆ ಕಾಯಕಯೋಗಿ ಪ್ರಶಸ್ತಿ ನೀಡಲಾಯಿತು. ನಾಗಲಕ್ಷ್ಮೀರಾಣಿ, ಮಂಜುನಾಥ ಎಂ.ಭೀಮನಕೋಣೆ, ಗಾಯತ್ರಿ ವೈ.ಗೆಣಸಿನಕುಣಿ, ಎಚ್.ವಿ.ನಾಗರತ್ನಾ, ನೂರೊಂದವ್ವ ಚನ್ನಪ್ಪ ತೆಗ್ಗಿನಮನಿ ಸುರಪುರ, ಡಿ.ಬಿ.ರುದ್ರಪ್ಪ ಅವರಿಗೆ ತಲಾ 5 ಸಾವಿರ ನಗದು, ಫಲಕ ಪುರಸ್ಕಾರ ನೀಡಲಾಯಿತು.
ಹೆಗ್ಗೋಡು ಗ್ರಾಪಂ ಅಧ್ಯಕ್ಷ ಶ್ರೀಧರ ಪಟೇಲ್, ಆರ್ಬಿಐ ನಿವೃತ್ತ ಅಧಿಕಾರಿ ವೆಂಕಟನಾಥನ್, ಚಿಕ್ಕಲಿಂಗಂ ಮುತ್ತಯ್ಯ, ಚರಕ ಸಂಸ್ಥೆ ಅಧ್ಯಕ್ಷೆ ಗೌರಮ್ಮ ಇತರರಿದ್ದರು. ಸಭಾ ಕಾರ್ಯಕ್ರಮದ ನಂತರ ‘ರಾಜಾ ರುದ್ರಕೋಪ’ ಯಕ್ಷಗಾನ ಪ್ರದರ್ಶನಗೊಂಡಿತು.
ನೇಕಾರ ಹೆಣ್ಣುಮಕ್ಕಳಿಗೆ ಸಂದ ಗೌರವ: ನಾನು ಮೂಲತಃ ಗುಳೇದಗುಡ್ಡದ ಸುರಪುರದವಳು. ನೇಕಾರಿಕೆಯೇ ನಮ್ಮ ಜೀವಾಳ. ಕಳೆದ 15 ವರ್ಷಗಳಿಂದ ನೇಕಾರಿಕೆ ಮಾಡಿಕೊಂಡು ಬಂದಿದ್ದೇನೆ. ರೇಷ್ಮೆ ಮಗ್ಗದಲ್ಲಿ ಎಂಟು ಕೋಲು ತೇರು, ಕಳಾವರ ಏಲಕ್ಕಿ, ಆನೆಹೆಜ್ಜೆ, ಚೆಂಡುಹೂ, ಸೂರ್ಯನಾರಾಯಣನ ಚಿತ್ತಾರವನ್ನು ಅತ್ಯಂತ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದೇನೆ ಎಂದು ‘ವಿಜಯವಾಣಿ’ ಜತೆ ಸಂತಸ ಹಂಚಿಕೊಂಡರು ಪ್ರಶಸ್ತಿ ಪುರಸ್ಕೃತೆ ನೂರೊಂದವ್ವ. ಹತ್ತು ವರ್ಷಗಳಿಂದ ಬನಶಂಕರಿ ಮಹಿಳಾ ಕೈಮಗ್ಗ ಮೂಲಕ ಬಟ್ಟೆ ನೇಯ್ದು ಕೆಲಸ ಮಾಡುತ್ತಿದ್ದೇನೆ. ನಮ್ಮ ಕೆಲಸಕ್ಕೆ ಪ್ರಶಸ್ತಿ ಕೊಡುತ್ತಾರೆ ಎಂದು ಕೂಡ ತಿಳಿದಿರಲಿಲ್ಲ. ಇಂಥದ್ದೊಂದು ಪ್ರಶಸ್ತಿ ನನಗೆ ಸಿಕ್ಕಿರುವುದು ನೇಕಾರ ಹೆಣ್ಣುಮಕ್ಕಳಿಗೆ ಸಂದ ಗೌರವ ಎಂದರು.