ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರದ ಪಾತ್ರ ಹಿರಿದಾಗಿದೆ. ಮುಖ್ಯವಾಗಿ ಸಕ್ಕರೆ ಕಾರ್ಖಾನೆಗಳು ಸ್ಥಾಪನೆಯಲ್ಲಿ ಸಹಕಾರಿ ಸಂಘಗಳ ಕೊಡುಗೆ ಮಹತ್ತರವಾಗಿದೆ ಎಂದು ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ನವನಗರದ ಸೆಕ್ಟರ್ ಸಂಖ್ಯೆ ೨೫ರಲ್ಲಿ ನೂತನವಾಗಿ ನಿರ್ಮಿಸಿರುವ ಬಾಪೂಜಿ ಸಹಕಾರಿ ಸಂಘ ನಿಯಮಿತದ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕಾಗದ ಪತ್ರ ಹೊಂದಿಸಿ ನೀಡಿದರು ಸಾಲ ದೊರೆಯುವುದಿಲ್ಲ. ಸಹಕಾರಿ ಸಂಘಗಳಲ್ಲಿ ಬೇಗನೆ ಸಾಲ ದೊರೆಯುತ್ತದೆ. ಸಕಾಲಕ್ಕೆ ಸಾಲ ಮರು ಪಾವತಿಯಾದಲ್ಲಿ ಬ್ಯಾಂಕಿನ ಅಭಿವೃದ್ಧಿ ಜೊತೆಗೆ ಸಾಮಾಜಿಕ ಭದ್ರತೆಯು ಹೆಚ್ಚಳವಾಗುತ್ತದೆ ಎಂದರು.
ಪತ್ತಿನ ಸಹಕಾರ ಸಂಘಗಳಲ್ಲಿ ಸಾಲ ಪಡೆದವರು ಸಾಲವನ್ನು ಸದುದ್ದೇಶಕ್ಕೆ ಬಳಸುವ ಮೂಲಕ ಸರಿಯಾಗಿ ಸಂಘಗಳಿಗೆ ಬಡ್ಡಿ ಸಮೇತರಾಗಿ ಕಟ್ಟಿದಾಗ ಮಾತ್ರ ಸಂಘಗಳು ಬೆಳೆಯುವ ಜತೆಗೆ ಅದರಿಂದ ಸಾಲ ಪಡೆದವರು ಸಹಿತ ಬೆಳೆಯಲು ಸಾಧ್ಯವಾಗುತ್ತದೆ. ಸಹಕಾರ ಸಂಘಗಳ ಯಶಸ್ಸಿನಲ್ಲಿ ನಿರ್ದೇಶಕ ಮಂಡಳಿ ಜೊತೆಗೆ ಸಿಬ್ಬಂದಿಗಳ ಪಾತ್ರವು ಅಡಗಿದೆ. ಗ್ರಾಹಕರ ವಿಶ್ವಾಸಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ಚುಕ್ಕಾಣೆ ಹಿಡಿದವರ ಮೇಲಿದೆ. ಎಸ್.ಆರ್.ಪಾಟೀಲ ಅತ್ಯಂತ ಯಶಸ್ಸಿಯಾಗಿ ನಿಭಾಯಿಸಿದ್ದಾರೆ ಎಂದರು.
ದೇಶದ ಜಿಡಿಪಿ ಹೆಚ್ಚಿದೆ ಬೆನ್ನು ತಟ್ಟಿಕೊಳ್ಳುವ ಹಂತದಲ್ಲಿ ನಾವಿಲ್ಲ. ದೇಶದಲ್ಲಿ ೧೦ ಎಕರೆ ಹೊಂದಿರುವ ರೈತನಿಗಿಂದ ಬುಟ್ಟಿಯಲ್ಲಿ ಕಾಳು ಮಾರುವವರು ಹೆಚ್ಚು ಆದಾಯ ಪಡೆಯುತ್ತಿದ್ದಾರೆ. ದೇಶದ ಗ್ರಾಮೀಣ ಭಾಗದ ಜಿಡಿಪಿ ೫ ರಿಂದ ೬ ಆದಾಗ ಮಾತ್ರ ದೇಶದ ಜಿಡಿಪಿ ಉತ್ತಮವಾಗುತ್ತದೆ. ಬಾಪೂಜಿ ಬ್ಯಾಂಕ್ ರಾಜ್ಯದ ಎಲ್ಲೆಡೆ ತನ್ನ ಕಚೇರಿ ಸ್ಥಾಪಿಸಬಹುದು. ಹೊರ ರಾಜ್ಯದಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಮುಂದಾದಲ್ಲಿ ಕೇಂದ್ರ ಸರ್ಕಾರ ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ರಾಜ್ಯದಲ್ಲಿ ಸಾಕಷ್ಟು ವಿಸ್ತರಣೆ ಅವಕಾಶವಿದ್ದು, ಈ ಬಗ್ಗೆ ಗಮನ ಹರಿಸದರೇ ಸೂಕ್ತ ಎಂದು ಅಭಿಪ್ರಾಯ ಪಟ್ಟರು.
ಮಹಾರಾಷ್ಟ್ರದ ಕೊಲ್ಲಾಪುರದ ಕನ್ನೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಮಾತನಾಡಿ, ಜನರಿಂದ, ಜನರಿಗಾಗಿ ಹಾಗೂ ಜನರಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ. ಆದರೆ, ಇಂದು ಹಣ ಎಲ್ಲ ರೂಪದಲ್ಲಿ ವ್ಯಾಪಿಸಿರುವುದರಿಂದ ಧನದಿಂದ ಧನಕ್ಕಾಗಿ ಧನವಂತರು ನಡೆಸುವ ವ್ಯವಸ್ಥೆ ಜಾರಿಗೆ ಬಂದಿದೆ. ಜೀವನದ ಮೌಲ್ಯಗಳು ಕುಸಿದು ಹೋಗಿವೆ. ಹೀಗಾಗಿ ಮನುಷ್ಯ ದಿನದಿಂದ ದಿನಕ್ಕೆ ಅಗ್ಗವಾಗುತ್ತಾ ಹೋಗುತ್ತಿದ್ದಾನೆ. ಕಾಳುಗಳಿಗೆ ಇರುವ ಬೆಲೆಯೂ ಮನುಷ್ಯನಿಗೆ ಇಲ್ಲವಾಗಿದೆ. ಮೌಲ್ಯ ಅರ್ಥಪೂರ್ಣಗೊಳಿಸುವ ಕೆಲಸವಾಗಬೇಕಿದೆ. ಎಸ್.ಆರ್.ಪಾಟೀಲ ಈ ಸಾರಿಯಲ್ಲಿ ಸಾಗುತ್ತಿದ್ದಾರೆ ಎಂದು ಹೇಳಿದರು.
ನಾಮಫಲಕವನ್ನು ಸಂಸದ ಪಿ.ಸಿ.ಗದ್ದಿಗೌಡರ ಅನಾವರಣಗೊಳಿಸಿದರು. ಆಡಳಿತ ಮಂಡಳಿ ಸಭಾ ಭವನವನ್ನು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಉದ್ಘಾಟಿಸಿದರು. ಸಭಾ ಭವನವನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಉದ್ಘಾಟಿಸಿದರು. ಗಣಕಯಂತ್ರವನ್ನು ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಉದ್ಘಾಟಿಸಿದರು. ಕ್ಯಾಶ ಕೌಂಟರ್‌ವನ್ನು ಜಿ.ನಂಜನಗೌಡ ಉದ್ಘಾಟಿಸಿದರು. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಉಪಾಧ್ಯಕ್ಷ ಎ.ಆರ್.ಪ್ರಸನ್ನಕುಮಾರ, ರಾಜ್ಯ ಅಪೆಕ್ಸ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿ.ಎನ್.ದೇವರಾಜ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಶರಣಗೌಡ ಪಾಟೀಲ, ಸಂಸ್ಥೆಯ ಉಪಾಧ್ಯಕ್ಷ ಜಿ.ಎನ್.ಪಾಟೀಲ, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಮೋಟಗಿ, ನಿರ್ದೇಶಕರಾದ ಎಂ.ಎಸ್.ಪಾಟೀಲ, ಎಂ.ಟಿ.ಅರಳಿಕಟ್ಟಿ, ಎಸ್.ಬಿ.ಬೆಳಗಲಿ ಸೇರಿದಂತೆ ಅನೇಕರಿದ್ದರು.