ಹುಕ್ಕೇರಿ: ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ನೂತನವಾಗಿ ಪ್ರಾರಂಭವಾದ ಅಣ್ಣಾ ಸೌಹಾರ್ದ ಸಹಕಾರಿ ಸಂಘವನ್ನು ಶುಕ್ರವಾರ ಆಹಾರ ಮತ್ತು ಅರಣ್ಯ ಇಲಾಖೆ ಸಚಿವ ಉಮೇಶ ಕತ್ತಿ ಉದ್ಘಾಟಿಸಿದರು.
ನಂತರ ಮಾತವಾಡಿ, ಗ್ರಾಮದ ಯುವಕರು ಪ್ರಾರಂಭಿಸುತ್ತಿರುವ ಸೌಹಾರ್ದ ಸಹಕಾರಿ ಜಿಲ್ಲಾ ವ್ಯಾಪಿ ಕಾರ್ಯ ಕ್ಷೇತ್ರ ಹೊಂದಿದೆ. ಗ್ರಾಹಕರ ಹಾಗೂ ಸದಸ್ಯರ ವಿಶ್ವಾಸ ವೃದ್ಧಿಸಿಕೊಂಡು ರಾಜ್ಯವ್ಯಾಪಿ ವಿಸ್ತರಿಸಲಿ ಹಾರೈಸಿದರು.
ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಠೇವಣಿ ಪತ್ರ ವಿತರಿಸಿ ಮಾತನಾಡಿ, ಜಿಲ್ಲೆಯ ಸಹಕಾರಿ ವಲಯದಲ್ಲಿ ಮುಂಚೂಣಿ ಪಾತ್ರ ವಹಿಸಿದ ಬೆಲ್ಲದ ಬಾಗೇವಾಡಿ ರಾಜಕೀಯ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಸಾಕಷ್ಟು ಹೆಸರು ಮಾಡಿದೆ. ಅಂತಹ ಗ್ರಾಮದ ಯುವಕರು ಪ್ರಾರಂಭಿಸಿರುವ ಸಹಕಾರಿ ಸಂಘ ನಾಡಿನ ಬಡ ಹಾಗೂ ಮಧ್ಯಮ ವರ್ಗದ ಜನರ ಆರ್ಥಿಕ ಸುಧಾರಣೆಗೆ ನೆರವಾಗಲಿ ಎಂದರು.
ಸಹಕಾರಿ ಸಂಘದ ಅಧ್ಯಕ್ಷ ಸಂದೀಪ ಕತ್ತಿ ಮಾತನಾಡಿ, ಸಚಿವ ಉಮೇಶ ಕತ್ತಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹಾಗೂ ಗುರು ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಸಹಕಾರಿಯಾಗಿ ಗುರುತಿಸಿಕೊಳ್ಳುವಂತೆ, ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತದೆ. ಕತ್ತಿ ಸಹೋದರರ ಸಾಮಾಜಿಕ ಕೊಡುಗೆ ಹಾಗೂ ಗ್ರಾಮದ ಗುರು ಹಿರಿಯರ ಸೇವೆ ಸ್ಮರಿಸುವ ನಿಟ್ಟಿನಲ್ಲಿ ನೂತನ ಸಹಕಾರಿಗೆ ಅಣ್ಣಾ ಸೌಹಾರ್ದ ಸಹಕಾರಿ ಎಂದು ಹೆಸರಿಸಲಾಗಿದೆ ಎಂದರು.
ಸಹಕಾರಿ ಸಂಘದ ಆಡಳಿತ ಮಂಡಳಿಯವರು ಸಚಿವ ಉಮೇಶ ಕತ್ತಿ ಅವರನ್ನು ಸತ್ಕರಿಸಿದರು. ಗ್ರಾಪಂ ಅಧ್ಯಕ್ಷೆ ಜ್ಯೋತಿ ಮಾಹೂರಕರ, ದಿಲೀಪ ವಾಳಿಖಿಂಡಿ, ಆರ್.ಟಿ. ಶಿರಾಳಕರ, ಮಲ್ಲಿಕಾರ್ಜುನ ಕಣಗಲಿ, ರಾಜಶೇಖರ ಮಹಾಶೆಟ್ಟಿ, ಅಪ್ಪಾಸಾಹೇಬ ಖೇಮಲಾಪುರೆ, ಮಹಾಲಿಂಗ ಶೆಟ್ಟಿ, ಮಲ್ಲಿಕಾರ್ಜುನ ಪೂಜಾರಿ, ಸತೀಶ ಜಾಗನೂರಿ, ರಾಜು ಖೇಮಲಾಪುರೆ, ದೀಪಕ ಮಾಳಗಿ ಇದ್ದರು. ಎಂ.ಕೆ.ಅಮ್ಮಣಗಿ ಸ್ವಾಗತಿಸಿದರು.