ಬೆಳಗಾವಿ: ಸೌಹಾರ್ದ ಸಹಕಾರಿ ಚಳವಳಿಯು ಇನ್ನೂ ಚಳವಳಿಯಾಗಿ ಉಳಿದಿದೆ. ವ್ಯವಸ್ಥಿತವಾಗಿ ಯಾವುದೇ ತಿರುವು ಪಡೆದಿಲ್ಲ ಎಂದು ರಾಜ್ಯ ಸೌಹಾರ್ದ ಸಹಕಾರಿ ನಿಯಮಿತ ಬೆಳಗಾವಿ ಪ್ರಾಂತೀಯ ವ್ಯವಸ್ಥಾಪಕ ಶ್ರೀಕಾಂತ ಬರುವೆ ಹೇಳಿದರು.
ನಗರದ ಬೆಳಗಾವಿ ಪ್ರಾಂತೀಯ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಹಕಾರಿ ಸೌಹಾರ್ದದ 121ನೇ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರದ ಪುನಶ್ಚೇತನಕ್ಕೆ ಸಾವಿರಾರು ಕೋಟಿ ರೂ. ವ್ಯಯಿಸಿದಾಗಲೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಿಲ್ಲ. ಕಟ್ಟುನಿಟ್ಟಾದ ಸಹಕಾರ ಕಾಯ್ದೆ ಜಾರಿಗೆ ತರಲು ಅನೇಕರು ಶ್ರಮಿಸುತ್ತಿದ್ದರೂ ನಿರೀಕ್ಷಿತ ಫಲ ಸಿಕ್ಕಿಲ್ಲ. ಹಾಗಾಗಿ, ಎಲ್ಲರೂ ಸಂಘಟಿತರಾಗಿ ಶ್ರಮಿಸಬೇಕಿದೆ ಎಂದರು.
ಸಹಕಾರಿ ಸಂಘಗಳ ಲೆಕ್ಕ ಪರಿಶೋಧನಾ ವಿಭಾಗ ನಿರ್ದೇಶಕ ಎಸ್.ಎಚ್.ಬಸವರಾಜ ಮಾತನಾಡಿ, ಸೌಹಾರ್ದ ಸಹಕಾರಿಗಳು ಶೀಘ್ರಗತಿಯಲ್ಲಿ ಹುಟ್ಟುತ್ತಿವೆ. ಆದರೆ, ಅವುಗಳ ಬೆಳವಣಿಗೆ ಮಾತ್ರ ಕುಂಠಿತಗೊಳ್ಳುತ್ತಿದೆ. ಆದ್ದರಿಂದ ಉತ್ತಮ ರೀತಿಯಲ್ಲಿ, ಕಾನೂನುಗಳ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಸಹಕಾರಿ ಸೌಹಾರ್ದ ಸಂಘಗಳ ಬೆಳವಣಿಗೆ ಸಾಧ್ಯ.
ಇದಕ್ಕೆ ಇಲಾಖೆಗಳಿಂದ ಅಗತ್ಯ ಸಹಕಾರ ನೀಡಲಾಗುವುದು. ಆ ನಿಟ್ಟಿನಲ್ಲಿ ಪ್ರಯೋಜನ ಪಡೆಯಲು ಸಂಘಗಳು ಸಕಾರಾತ್ಮಕವಾಗಿ ಪ್ರಯತ್ನಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನ ರಾಜ್ಯ ಸೌಹಾರ್ದ ಸಹಕಾರಿ ವೃತ್ತಿಪರ ನಿರ್ದೇಶಕ ಲಕ್ಷ್ಮಣ ಪವಾರ ಅವರು ಸೌಹಾರ್ದ ಸಹಕಾರಿ ಸಂಘದ ಧ್ವಜಾರೋಹಣ ನೆರವೇರಿಸಿದರು. ರಾಜ್ಯ ಉಪಾಧ್ಯಕ್ಷ ಜಗದೀಶ ಕವಟಗಿಮಠ, ರವೀಂದ್ರ ಪಾಟೀಲ, ಎಂ.ಎಸ್. ಕೇದಾರಿ, ಸಹಕಾರಿ ಸಂಘಗಳ ಜಿಲ್ಲಾ ಮತ್ತು ರಾಜ್ಯಮಟ್ಟದ ವಿವಿಧ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸೌಹಾರ್ದ ಸಹಕಾರಿ ಸಂಘಗಳ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.