ಚಿತ್ರದುರ್ಗ: ಸಹಕಾರ ಕ್ಷೇತ್ರದಲ್ಲಿ ಯಾವುದೇ ಪಕ್ಷ, ಜಾತಿ, ಮತ, ಧರ್ಮ ಬೇಧವಿಲ್ಲ ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಜಿಂಕಲು ಬಸವರಾಜ್ ಹೇಳಿದರು.
ಸಹಕಾರ ಇಲಾಖೆ, ರಾಜ್ಯಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ, ಹೊಳಲ್ಕೆರೆ ಹಾಗೂ ಹೊಸದುರ್ಗ ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಮುಖ್ಯಕಾರ್ಯನಿರ್ವಾಹಕರಿಗೆ ನಗರದಲ್ಲಿ ಬುಧವಾರ ಏರ್ಪಡಿಸಿದ್ದ ಒಂದು ದಿನದ ರಾಜ್ಯಮಟ್ಟದ ವಿಶೇಷ ತರಬೇತಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಕಾರ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರೂ ಭಾಗವಹಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಇರುವಂತೆ ಬೇರಾವುದೇ ಕ್ಷೇತ್ರದಲ್ಲಿ ಇಷ್ಟೊಂದು ಚುನಾಯಿತ ಪ್ರತಿನಿಧಿಗಳು ಇರುವುದಿಲ್ಲ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗೆ ಪೂರಕವಾಗಿರುವ ಸಹಕಾರ ಕ್ಷೇತ್ರದ ಕಾನೂನು ತಿದ್ದುಪಡಿಯಾಗಿದೆ. ಚುನಾವಣೆಯಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಮೀಸಲಾತಿ ಇರಲಿದೆ. ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಸಚಿವಾಲಯ ರಚಿಸಿದೆ. ಈ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ ಎಂದರು.
ರಾಜ್ಯಸಹಕಾರ ಮಾರಾಟ ಮಹಾಮಂಡಳದ ನಿರ್ದೇಶಕ ಎಸ್.ಆರ್. ಗಿರೀಶ್ ಮಾತನಾಡಿ, ಶಿಕ್ಷಣ, ತರಬೇತಿ ಮತ್ತು ಪ್ರಚಾರ ಮಹಾ ಮಂಡಳದ ಮೂಲ ಉದ್ದೇಶವಾಗಿದೆ. ಸಂಘದ ಕಾರ್ಯದರ್ಶಿಗಳು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಡಿಸಿಸಿ ಮತ್ತು ಅಫೆಕ್ಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡಬೇಕೆಂಬ ಕಾಯ್ದೆ ಇರುವುದನ್ನು ಗಮನಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ. ದ್ಯಾಮಣ್ಣ ಕೋಗುಂಡೆ ಮಾತನಾಡಿದರು. ಸಹಕಾರಿಗಳಾದ ಜಿ.ಬಿ. ಶೇಖರಪ್ಪ, ಜಿ.ಇ. ಅಜ್ಜಪ್ಪ, ಮಾತೃಶ್ರೀ ಮಂಜುನಾಥ್, ಡಿ.ಎಂ. ಮಹೇಶ್ವರಪ್ಪ, ಜಿ.ಎನ್. ಹರೀಶ್, ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್. ದಿಲೀಪ್‌ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಸಮನ್ವಯಾಧಿಕಾರಿ ಎಸ್.ವಿ. ಹಿರೇಮಠ್ ಇದ್ದರು.
ಚಿಕ್ಕಮಗಳೂರು ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ವಿ. ಬಸವರಾಜಪ್ಪ, ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಎಂಡಿ ಇಲ್ಯಾಸ್‌ಉಲ್ಲಾ ಷರೀಫ್ ಉಪನ್ಯಾಸ ನೀಡಿದರು. ಜಯಶ್ರೀ ಪಿ.ಹುನಗುಂದ ನಿರೂಪಿಸಿದರು. ನಾಗರಾಜ್‌ಪಾಟೀಲ್ ಸ್ವಾಗತಿಸಿ, ಸೌಮ್ಯ, ವಂದಿಸಿದರು.