ಜಿಲ್ಲೆ

ಸಹಕಾರಿ ಕ್ಷೇತ್ರದ ಸೌಲಭ್ಯ ಪಡೆದುಕೊಳ್ಳಿ

ಚಿಕ್ಕಬಳ್ಳಾಪುರ : ಸಹಕಾರಿ ಕ್ಷೇತ್ರದಲ್ಲಿ ಸಿಗುತ್ತಿರುವ ಸವಲತ್ತುಗಳನ್ನು ಅರ್ಹರು ಸಕಾಲಕ್ಕೆದ್ವಿನಿಯೋಗಪಡಿಸಿಕೊಳ್ಳಬೇಕು ಎಂದು ನಂದಿ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಸಲಹೆ ನೀಡಿದರು.

ತಾಲೂಕಿನ ನಂದಿಯ ರೇಷ್ಮೆ ಬೆಳೆಗಾರರು ಮತ್ತು ರೈತರ ಸೇವಾ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ಸಂಘವು ಉತ್ತಮ ನಿರ್ವಹಣೆಯಿಂದ ಒಳ್ಳೆಯ ಆರ್ಥಿಕ ಲಾಭ ಗಳಿಸಿದೆ. ಕಳೆದ ಸಾಲಿನಲ್ಲಿ ರೈತರಿಗೆ ನೀಡಿದ ಕೃಷಿ ಬೆಳೆ ಸಾಲ 1.16 ಕೋಟಿ ರೂ ಪೈಕಿ ಈಗಾಗಲೇ 1.06 ಕೋಟಿ ರೂ ಮನ್ನಾ ಆಗಿದೆ. ಸಂಘದಲ್ಲಿ 400 ಮಂದಿ ಸದಸ್ಯರಿದ್ದು ಹೊಸದಾಗಿ ಅರ್ಹರಿಗೆ ಎಕರೆಗೆ 2 ಲಕ್ಷ ರೂ ಬೆಳೆ ಸಾಲ ನೀಡಲು ನಿರ್ಧರಿಸಲಾಗಿದೆ ಎಂದರು.

ಈಗಾಗಲೇ ಸಂಘವು ನ್ಯಾಯ ಬೆಲೆ ಅಂಗಡಿ ನಿರ್ವಹಣೆಯ ಮೂಲಕ 600 ಮಂದಿ ಫಲಾನುಭವಿಗಳಿಗೆ ಪಡಿತರ, ಸೀಮೆಎಣ್ಣೆ ವಿತರಿಸುತ್ತಿದೆ. ಪ್ರಸ್ತುತ ಸಮೀಪದ ಸುಲ್ತಾನಪೇಟೆಯ ಸಂಘದಲ್ಲಿ ಹಲವು ಲೋಪಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ನಿಯಮಾನುಸಾರ ಉಸ್ತುವಾರಿ ವಹಿಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಪ್ರತಿ ಷೇರು ಹಣವನ್ನು 500 ರೂಗಳಿಂದ 1 ಸಾವಿರ ಕ್ಕೆ ಏರಿಸಲು, ಹೊಸ ಷೇರು ಮತ್ತು ಆಡಳಿತ ಮಂಡಳಿ ನಿರ್ವಹಣೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ವಿ.ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಜೆಸಿಬಿ ಮಂಜುನಾಥ್, ಸಂಘದ ನಿರ್ದೇಶಕರಾದ ಲತಾ ಸುರೇಶ್, ಜಮರ‌್ರುದ್ ಪಾಷಾ, ರಾಮಣ್ಣ, ಎನ್.ಆರ್.ಮಂಜುನಾಥ್, ಭಾಷಾ, ಪ್ರಸನ್ನ, ಮುಖಂಡ ಎನ್.ಮೂರ್ತಿ ಮತ್ತಿತರರು ಇದ್ದರು.