ತುಮಕೂರು: ಕಠಿಣವಾಗಿದ್ದ ಸಹಕಾರಿ ಕಾಯ್ದೆಗೆ ಬಹಳಷ್ಟು ತಿದ್ದುಪಡಿ ಮಾಡಿ ಸರಳೀಕರಣಗೊಳಿಸುವ ಪ್ರಯತ್ನ ಮಾಡಲಾಗಿದೆ ಎಂದು ಸಹಕಾರ
ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟ ನಗರದ ಶ್ರೀದೇವಿ ವೈದ್ಯಕಿಯ ಕಾಲೇಜು ಸಭಾಂಗಣದಲ್ಲಿ ಜಿಲ್ಲೆಯ ಸಹಕಾರ ರತ್ನ ಪ್ರಶಸ್ತಿ ಪುರಸತರಿಗೆ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ, ಆರ್ಥಿಕ ಬದಲಾವಣೆಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ. ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವವರು ಮೊದಲು ಸಹಕಾರಿ ಆಂದೋಲನದ ಇತಿಹಾಸ ತಿಳಿಯಬೇಕು. ಇತಿಹಾಸ ತಿಳಿದರಷ್ಟೇ ನಾವೂ ಕೆಲಸ ಮಾಡಿ ಇತಿಹಾಸ ಸೃಷ್ಟಿಸಿಲು ಸಾಧ್ಯ. ಯುವಕರು, ಯುವತಿಯರು ಸಹಕಾರಿ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಜನಸಾಮಾನ್ಯರೂ ಸಹಕಾರಿ ಕ್ಷೇತ್ರಗಳಲ್ಲಿ ಸರಳವಾಗಿ ಹಣ ಸಾಲಪಡೆದು ತಮ್ಮ ವ್ಯವಹಾರಗಳಿಗೆ ಬಳಸಿಕೊಳ್ಳಲು ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಾ ಸಹಕಾರ ಸಂಘಗಳೇ ಹೆಚ್ಚು ಸಹಕಾರಿ. ಈ ಬಾರಿ ಸಹಕಾರಿ ರತ್ನ ಪ್ರಶಸ್ತಿ ಪಡೆದ ಎಲ್ಲರೂ ಅವರ ಸಂಘಗಳ ಮೂಲಕ ಉತ್ತಮ ಕೆಲಸ ಮಾಡಿದ್ದಾರೆ ಎಂದರು.
ಹಣ, ಜಾತಿ ಇಲ್ಲದೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವೆಂದರೆ ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿ ಗುರುತಿಸಿಕೊಳ್ಳಬೇಕು. ಇದಕ್ಕೆ ನಾನೇ ಉದಾಹರಣೆ. ಅಘೋಚರ ಮತದಾರರೂ ನಮಗೆ ಮತ ನೀಡಿ ಗೆಲ್ಲಿಸಿದ್ದಾರೆ. ಸಹಕಾರಿ ಕ್ಷೇತ್ರ ಅಂತಹ ಪ್ರಭಾವಶಾಲಿಯಾಗಿದೆ ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸಹಕಾರ ಕ್ಷೇತ್ರದಿಂದ ಎಲ್ಲ ವರ್ಗದವರೂ ಸಾಲ ಸೌಲಭ್ಯ ಪಡೆದು ಆರ್ಥಿಕ ಸದೃಢರಾಗಲು ಅವಕಾಶವಿದೆ. ಬೀದಿಬದಿ ವ್ಯಾಪಾರಿಗಳು, ಸಣ್ಣಪುಟ್ಟ ವ್ಯಾಪಾರಿಗಳು ಸಹಕಾರ ಸಂಘಗಳಿಂದ ಸಾಲ ಪಡೆದು ವ್ಯವಹಾರ ವೃದ್ಧಿಸಿಕೊಳ್ಳುತ್ತಿದ್ದಾರೆ. ಇದು ಸಹಕಾರಿ ಸಂಘಗಳಿಂದ ಮಾತ್ರ ಸಾಧ್ಯ ಎಂದರು. ಮಾಜಿ ಶಾಸಕ ಡಾ.ಎಂ.ಆರ್.ಹುಲಿನಾಯ್ಕರ್, ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಗೌರವಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿದರು. ಸಹಕಾರ ರತ್ನ ಪ್ರಶಸ್ತಿ ಪಡೆದ ಮಾಜಿ ಶಾಸಕ ಗಂಗಹನುಮಯ್ಯ, ಹನುಮಂತಯ್ಯ, ಪಿ.ಮೂರ್ತಿ, ಟಿ.ಆರ್.ಆಂಜನಪ್ಪ, ಹೆಬ್ಬಾಕ ಮಲ್ಲಿಕಾರ್ಜುನ್, ಜಿ.ಜೆ.ರಾಜಣ್ಣ, ಬಿ.ಸಿ.ಉಮೇಶ್, ಜಿ.ಎಸ್.ರವಿ, ಪಿ.ಎಸ್.ಗುರುಪ್ರಸಾದ್, ಎಸ್.ರಾಮಚಂದ್ರಯ್ಯ, ಎಲ್.ರಾಮಣ್ಣ, ಚಂದ್ರಶೇಖರಾರಾಧ್ಯ, ಎಸ್.ಎಲ್.ರಂಗನಾಥ್, ಟಿ.ಹೆಚ್.ಶಿವಾನಂದ್, ಸೈಯದ್ ಮೆಹಬೂಬ್ ಪಾಷಾ,ಡಿ.ಟಿ.ರಂಗಸ್ವಾಮಿ ಅವರನ್ನು ಗೌರವಿಸಿದರು. ಹಿಂದುಳಿದ ವರ್ಗಗಳ ಮುಖಂಡರಾದ ಜಿ.ಎಂ.ಸಣ್ಣಮುದ್ದಯ್ಯ, ಒಕ್ಕೂಟದ ಉಪಾಧ್ಯಕ್ಷ ಸತೀಶ್, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಆರ್ಯ ಈಡಿಗರ ಸಂಘದ ಜಿಲ್ಲಾಧ್ಯಕ್ಷ ನಾಗರಾಜು, ಮಡಿವಾಳರ ಸಂಘದ ಜಿಲ್ಲಾಧ್ಯಕ್ಷ ಲಕ್ಷ$್ಮಣ್ ಮತ್ತಿತರರು ಇದ್ದರು.