ಹುಬ್ಬಳ್ಳಿ: ಪರಸ್ಪರ ಸಹಕಾರದಿಂದ ಮಾತ್ರ ಕರೊನಾ ಎರಡನೇ ಅಲೆಯನ್ನು ಎದುರಿಸಲು ಸಾಧ್ಯ ಎಂದು ಆರ್ಎಸ್ಎಸ್ ಅಖಿಲ ಭಾರತ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಹೇಳಿದರು.
ಇಲ್ಲಿಯ ಸೇವಾ ಭಾರತಿ ಟ್ರಸ್ಟ್ ಹಾಗೂ ನೆರವು ಸಹಯೋಗದಲ್ಲಿ ನಗರದ ಕಿಮ್ಸ್ ಎದುರು ಸ್ಥಾಪಿಸಲಾದ ಕರೊನಾ ಮಾಹಿತಿ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕರೊನಾ ವಿಚಾರದಲ್ಲಿ ಭಾರತವನ್ನು ಇತರೆ ರಾಷ್ಟ್ರಗಳ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೆರಿಕ, ಇಂಗ್ಲೆಂಡ್ಗೆ ಹೋಲಿಸಿದರೆ ಭಾರತ ಸೋಂಕನ್ನು ಸಮರ್ಥವಾಗಿ ಎದುರಿಸುತ್ತಿದೆ. ಸಂಘದಿಂದ 5 ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಹಗಲಿರುಳು ಸ್ವಯಂಪ್ರೇರಿತ ಕೋವಿಡ್ ವಾರಿಯರ್ ಆಗಿ ಶ್ರಮಿಸುತ್ತಿದ್ದಾರೆ. ಆತ್ಮಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಸಂಘದ ಕಡೆಯಿಂದ ಮಾಡುತ್ತಿದ್ದು, ಸಂಘ ಈ ಕಾರ್ಯವನ್ನು ಸಹಾಯ ಭಾವನೆಯಿಂದ ಹಾಗೂ ಸೌಹಾರ್ದದಿಂದ ಮಾಡುತ್ತಿದೆ ಎಂದರು.
ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಆರೋಗ್ಯ ಇಲಾಖೆಯೊಂದಿಗೆ ಸಹಕಾರ ನೀಡುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘನೀಯವಾದದ್ದು. ಬಡವರಿಗೆ ನೆರವು ನೀಡುವ ಕೆಲಸದಲ್ಲಿ ಸಂಘ-ಸಂಸ್ಥೆಗಳು ಮುಂಚೂಣಿಯಲ್ಲಿರುವುದು ಸಂತೋಷ ಉಂಟು ಮಾಡಿದೆ ಎಂದು ತಿಳಿಸಿದರು.
ಮೇ ತಿಂಗಳಲ್ಲಿ ಸೋಂಕು ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜನತೆಯ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ ಎಂದರು. ಡಾ. ಎಸ್.ವೈ. ಮುಲ್ಕಿಪಾಟೀಲ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಆರ್ಎಸ್ಎಸ್ ವಿಭಾಗ ಕಾರ್ಯವಾಹ ಕಿರಣ ಗುಡ್ಡದಕೇರಿ, ಸಹಾಯವಾಣಿ ಮೂಲಕ ಕೋವಿಡ್ ಮಾಹಿತಿ ನೀಡುವ ಕಾರ್ಯ, ಟೆಲಿ ಮೆಡಿಸಿನ್, ಅಂತ್ಯಸಂಸ್ಕಾರಕ್ಕೆ ನೆರವಾಗುವುದು, ಅಲ್ಲದೆ, ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯ ಉದ್ದೇಶವಿದ್ದು, ಕಾರ್ಯ ಪ್ರವೃತ್ತರಾಗಿದ್ದೇವೆ ಎಂದರು.
ಹುಬ್ಬಳ್ಳಿಯ ಸೇವಾ ಭಾರತಿ ಕಾರ್ಯದರ್ಶಿ ಗೋವರ್ಧನ ರಾವ್, ಡಾ. ರಾಜಶೇಖರ ದ್ಯಾಬೇರಿ, ಜಯತೀರ್ಥ ಕಟ್ಟಿ, ಬಸವರಾಜ ಕುಂದಗೋಳಮಠ, ಕಿಮ್ಸ್ ಅಧೀಕ್ಷಕ ಡಾ. ಅರುಣಕುಮಾರ, ಭದ್ರತಾ ಪಡೆ ಮುಖ್ಯಸ್ಥ ಎ.ಆರ್ ಬಡಿಗೇರ, ಡಾ. ಕಡಕೋಳ, ಡಾ. ಜಾಲಿಹಾಳ, ಉಮೇಶ ದುಶಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ಸಂತೋಷ ಚವ್ಹಾಣ, ಸುಭಾಸಸಿಂಗ್ ಜಮಾದಾರ್, ವಿನಯ ಸಜ್ಜನವರ, ಶಂಕರ ಗುಮಾಸ್ತೆ, ಮಹಾನಗರ ಪ್ರಚಾರಕ ವಿಶ್ವನಾಥ, ಶಿವಯ್ಯ ಹಿರೇಮಠ, ಬಸವರಾಜ
ದೇವರಮನಿ, ಸುಭಾಷ ಮಾಸಗೋನಿ, ಬೀರೇಶ ಎನ್.ಟಿ. ಇತರರು ಇದ್ದರು. ಜೀತೇಂದ್ರ ನಾಯಕ ಕಾರ್ಯಕ್ರಮ ನಿರೂಪಿಸಿದರು, ಸಂದೀಪ ಬೂದಿಹಾಳ ವಂದಿಸಿದರು.