ಜಿಲ್ಲೆ

ಸಹಕಾರದ ಸಂಸ್ಕಾರ ಬೆಳೆಸಿಕೊಳ್ಳಿ

ಹಾಸನ: ಸಹಕಾರದ ಸಂಸ್ಕಾರವನ್ನು ನಮ್ಮ ಸಮಾಜದವರು ಬೆಳೆಸಿಕೊಳ್ಳಬೇಕು. ನಾಡಿಗಾಗಿ ಹೆಚ್ಚಿನ ಸೇವೆಯನ್ನು ಮಾಡಿ ದೇವಾಂಗ ಸಮಾಜದ ಹೆಸರನ್ನು ಉಳಿಸಬೇಕು ಎಂದು ದೇವಾಂಗ ಸಮಾಜದ ರಾಜ್ಯಾಧ್ಯಕ್ಷ ಭಾಸ್ಕರಯ್ಯ ಹೇಳಿದರು.


ನಗರದ ಸಾಲಗಾಮೆ ರಸ್ತೆಯಲ್ಲಿರುವ ಲೀಲಾ ಪ್ಯಾರಡೈಸ್ ಸಭಾಂಗಣದಲ್ಲಿ ಭಾನುವಾರ ಹಾಸನ ಜಿಲ್ಲಾ ದೇವಾಂಗ ನೌಕರ ಸಂಘ ಹಾಗೂ ಪುರಾಣ ಪುರುಷ ದೇವಲ ಮಹರ್ಷಿ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಹಾಸನ ಜಿಲ್ಲಾ ದೇವಾಂಗ ನೌಕರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ದೇವಾಂಗ ಸಮಾಜದಲ್ಲಿ ಸಂಘಟನಾ ಶಕ್ತಿ ಕಡಿಮೆ ಇದೆ. ಹಾಗಾಗಿಯೇ ಸರ್ಕಾರದಿಂದ ಸಿಗುವ ಸೌಲಭ್ಯಗಳು ದೊರೆಯುತ್ತಿಲ್ಲ. ಮೊದಲು ನಾವು ಸಂಘಟಿತರಾಗಿ ದೇವಾಂಗ ಸಮಾಜವನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು.


ಸಮಾಜದವರು ಆರ್ಥಿಕವಾಗಿ ಹಿಂದುಳಿದಿದ್ದರೂ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ನಮ್ಮ ಮುಂದಿನ ಪೀಳಿಗೆಯು ಸಮಾಜ, ದೇಶದ ಏಳಿಗೆಗೆ ಮುಂದಾಗಬೇಕು ಎಂದು ಹೇಳಿದರು.


ಬಿ.ಸೋಮಶೇಖರ್ ಮಾತನಾಡಿ, ನಾಡು ನುಡಿಗಾಗಿ ನಮ್ಮ ಸಮಾಜ ಉತ್ತಮ ಕೊಡುಗೆಗಳನ್ನು ನೀಡಿದೆ. ಸಮುದಾಯದವರು ಸಂಘಟಿತರಾಗಿಲ್ಲದಿರುವುದು ನಮ್ಮ ದೌರ್ಬಲ್ಯ. ನಮ್ಮ ಸಮಾಜದಲ್ಲಿ ಹೆಚ್ಚಿನ ಬಡವರು ಇರುವುದರಿಂದ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಉತ್ತಮ ಸ್ಥಾನಕ್ಕೆ ಏರುವಂತೆ ಮಾಡಬೇಕು. ಇದಕ್ಕೆ ಸಂಘದ ಪರವಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ದೇವಾಂಗ ಸಂಘದ ಉಪಾಧ್ಯಕ್ಷ ನಾಗೇಶ್ ಕುಮಾರ್ ಹಾಸನ ಜಿಲ್ಲೆಯ ದೇವಾಂಗ ನೌಕರರ ಸಂಘದ ವೆಬ್‌ಸೈಟ್ ಬಿಡುಗಡೆ ಮಾಡಿ ಮಾತನಾಡಿ, ಸಮುದಾಯದ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಗುಣಮಟ್ಟದ ಶಿಕ್ಷಣ ನೀಡುವ ಅಗತ್ಯವಿದೆ ಎಂದರು.


ಡಾ.ಬಿ.ಆರ್.ಹಾಲೇಶ್ ಅಮೃತಧಾರೆ ಪುಸ್ತಕ ಬಿಡುಗಡೆ ಮಾಡಲಾಯಿತು. ಲೇಖಕ ಪುರುಷೋತ್ತಮ್, ಜಿ.ಆರ್.ಮಂಜೇಶ್, ನಾಗೇಶ್ ಕುಮಾರ್, ಕೆ.ಧರ್ಮೇಶ್, ನಾಗರಾಜ್, ಭರತ್ ಇತರರಿದ್ದರು.