ಜಿಲ್ಲೆ

ಸಹಕಾರ ಸಿಕ್ರೆ ಮೂರೇ ವರ್ಷದಲ್ಲಿ ಕ್ಷಯಮುಕ್ತ ಜಿಲ್ಲೆ: ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ ಅಭಿಮತ

ಚಿಕ್ಕಬಳ್ಳಾಪುರ : ಪ್ರತಿಯೊಬ್ಬರ ಸಹಕಾರ ಸಿಕ್ಕಿರೆ ಮೂರೇ ವರ್ಷದಲ್ಲಿ ಚಿಕ್ಕಬಳ್ಳಾಪುರವನ್ನು ಕ್ಷಯರೋಗ ಮುಕ್ತ ಜಿಲ್ಲೆಯನ್ನಾಗಿಸಬಹುದಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅಭಿಪ್ರಾಯಪಟ್ಟರು.

ಜಿಲ್ಲಾಸ್ಪತ್ರೆಯ ಆವರಣದಲ್ಲಿ ಬುಧವಾರ ವಿಶ್ವ ಕ್ಷಯರೋಗ ಜಾಗೃತಿ ಜಾಥಾಗೆ ಚಾಲನೆ ನೀಡಿದ ಮಾತನಾಡಿದ ಅವರು, ಕ್ಷಯ ಸಾಂಕ್ರಾಮಿಕ ಕಾಯಿಲೆಯಾಗಿದೆ, ರೋಗದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲ ಆರೋಗ್ಯ ಸಂಸ್ಥೆಗಳಲ್ಲಿ ಉಚಿತ ತಪಾಸಣೆ, ಚಿಕಿತ್ಸೆ ಸೇವೆ ಲಭ್ಯವಿದ್ದು ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರಕ್ಕಾಗಿ ಪ್ರತಿ ತಿಂಗಳು 500 ರೂ. ನೇರವಾಗಿ ರೋಗಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಚಿಕಿತ್ಸೆ ನಂತರ 1 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲಾದ್ಯಂತ ೆ.24 ರಿಂದ ಮಾ.24ರವರೆಗೆ ಅಭಿಯಾನ ಕೈಗೊಂಡು ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಈಗಾಗಲೇ 6 ಗ್ರಾಮಗಳನ್ನು ಸಂಪೂರ್ಣ ಕ್ಷಯಮುಕ್ತ ಪ್ರದೇಶ ಎಂಬುದಾಗಿ ಘೋಷಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಇಂದಿರಾ ಆರ್.ಕಬಾಡೆ ಮಾಹಿತಿ ನೀಡಿದರು.ಜಿಲ್ಲಾಸ್ಪತ್ರೆಯ ವೈದ್ಯಾಧಿಕಾರಿ ವಿಜಯಲಕ್ಷ್ಮೀ ಮತ್ತಿತರರು ಇದ್ದರು.

ಪ್ರಮುಖ ರಸ್ತೆಗಳಲ್ಲಿ ಜಾಥಾ : 'ಇದು ಸಮಯ ಕ್ಷಯಮುಕ್ತ ವಿಶ್ವ ನಿರ್ಮಾಣ' ಎಂಬ ಘೋಷ ವಾಕ್ಯದೊಂದಿಗೆ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ, ವಿಶ್ವ ಕ್ಷಯರೋಗ ನಿರ್ಮೂಲನಾ ಕೇಂದ್ರ, ಜಿಲ್ಲಾ ಏಡ್ಸ್ ಮತ್ತು ನಿಯಂತ್ರಣ ಘಟಕ ಕೈಗೊಂಡಿದ್ದ ಜಾಗೃತಿ ಜಾಥಾದಲ್ಲಿ ಜಿಲ್ಲೆಯ ತಾಲೂಕು ಆರೋಗ್ಯಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಿತ್ತಿ ಫಲಕದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿ, ಜನರಲ್ಲಿ ಅರಿವು ಮೂಡಿಸಿದರು.

1,281 ರೋಗಿಗಳ ಸಾವು : ಜಿಲ್ಲಾ ವ್ಯಾಪ್ತಿಯಲ್ಲಿ ಜುಲೈ 2008 ರಿಂದ 2020ರ ಅಂತ್ಯದವರೆಗೆ 20,552 ಕ್ಷಯರೋಗಿಗಳನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 16,854 ರೋಗಿಗಳು ಡಾಟ್ಸ್ ಚಿಕಿತ್ಸೆ ಪಡೆದು, ಕಾಯಿಲೆ ವಾಸಿಯಾಗಿದೆ. 1281 ರೋಗಿಗಳು ಮರಣ ಹೊಂದಿದ್ದಾರೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ ಯಲ್ಲಾ ರಮೇಶ್ ಬಾಬು ಮಾಹಿತಿ ನೀಡಿದರು.