ತರೀಕೆರೆ: ಸಹಕಾರ ಸಂಘದ ಸ್ಥಾಪನೆಯಿಂದ ಪ್ರತಿಯೊಬ್ಬರ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾ ಮಂಡಲದ ಮಾಜಿ ಉಪಾಧ್ಯಕ್ಷ ಟಿ.ವಿ.ಶಿವಶಂಕರಪ್ಪ ಹೇಳಿದರು.
ಹರಿಶ್ರೀ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಸಹಕಾರ ವ್ಯವಸ್ಥೆ ಪರಸ್ಪರ ಕೊಡು ತೆಗೆದುಕೊಳ್ಳುವಿಕೆಗೆ ಅತ್ಯುಪಯುಕ್ತವಾಗಿದೆ. ಜವಾಹರಲಾಲ್ ನೆಹರೂ ಪ್ರಧಾನಿ ಆಗಿದ್ದಾಗ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರಲ್ಲದೆ, ದೇಶದಲ್ಲಿ ಸಹಕಾರ ಸಂಘಗಳು ಬೆಳವಣಿಗೆ ಕಾಣಲು ಅನನ್ಯ ಕೊಡುಗೆ ನೀಡಿದ್ದಾರೆ ಎಂದರು.
ಸಹಕಾರ ಸಂಘಗಳ ಬೆಳವಣಿಗೆಗೆ ಸಾಲಗಾರರ ಮರು ಪಾವತಿ ಪ್ರಕ್ರಿಯೆ ಮಾತ್ರವಲ್ಲ, ಆಡಳಿತ ಮಂಡಳಿಯ ಸಮತೋಲಿತ ವ್ಯವಹಾರ, ಕಾರ್ಯಕ್ಷಮತೆ ಕೂಡ ಕಾರಣ. ಈ ದಿಸೆಯಲ್ಲಿ ಎಲ್ಲರೂ ಕೈಜೋಡಿಸಿ ಸಂಸ್ಥೆ ಉದ್ಧಾರಕ್ಕೆ ಶ್ರಮಿಸಬೇಕು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಪ್ರತಿಯೊಬ್ಬರ ಪಾಲುದಾರಿಕೆ ಅತ್ಯಗತ್ಯ. ಬದ್ಧತೆಯಿಂದ ಶ್ರಮ ವಹಿಸಿ ದುಡಿದಾಗ ಎಲ್ಲರಿಗೂ ಸಹಾಯ ಮಾಡುವುದು ಸುಲಭ. ಈ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರಿಯಬೇಕು ಎಂದರು.
ಹರಿಶ್ರೀ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಟಿ.ಇ.ವಾಸುದೇವಮೂರ್ತಿ ಮಾತನಾಡಿ, ಸಂಘದ ಮೂಲಕ ಸಾಲ ಸೌಲಭ್ಯ ನೀಡುವುದಲ್ಲದೆ, ಲಾಭ ಗಳಿಸುವತ್ತ ನಿಗಾವಹಿಸಲಾಗುವುದು. ಈ ಮೂಲಕ ಸಂಘದ ಪ್ರಗತಿಗೆ ಶ್ರಮಿಸಲಾಗುವುದು ಎಂದು ಹೇಳಿದರು.
ಉಡುಪಿ ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಚಿಕ್ಕಮಗಳೂರು-ಹಾಸನ ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಅಶೋಕ್, ಹರಿಶ್ರೀ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷೆ ಸ್ವಪ್ನಾ, ಹುಲಿಯಾಂಬಿಕಾ, ಮೀರಾ, ಡಾ. ಜ್ಯೋತಿ, ಜಯಣ್ಣ ಮತ್ತಿತರರಿದ್ದರು.