ಜಿಲ್ಲೆ

ಸಹಕಾರ ಸಂಘದಲ್ಲಿ ವ್ಯವಹರಿಸಿ ಉತ್ತೇಜನ ನೀಡಿ

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ರೈತರು ಸಹಕಾರ ಸಂಘದಲ್ಲಿ ವ್ಯವಹರಿಸಿ ಅಲ್ಲಿ ದೊರೆಯುವ ರಸಗೊಬ್ಬರ ಸೇರಿ ಅಗತ್ಯ ವಸ್ತುಗಳನ್ನು ಖರೀದಿಸಿ ಸಂಘದ ಬೆಳವಣಿಗೆಗೆ ಉತ್ತೇಜನ ನೀಡಬೇಕು ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ರೈತರು ಖಾಸಗಿ ಮಳಿಗೆಗಳಲ್ಲಿ ಖರೀದಿ ಮಾಡದೆ ಸಹಕಾರ ಸಂಘಗಳಲ್ಲಿ ರಸಗೊಬ್ಬರ, ಹಿಂಡಿ, ಬೂಸಾ ಹಾಗೂ ದಿನಬಳಕೆ ವಸ್ತುಗಳನ್ನು ಖರೀದಿಸಿ ಎಂದರು.
ಸಹಕಾರ ರತ್ನ ಪುರಸ್ಕೃತ ಜಿಲ್ಲಾ ಸಹಕಾರ ಯೂನಿಯನ್ ಬ್ಯಾಂಕ್ ನಿರ್ದೆಶಕ ಎ.ಸಿ.ನಾಗರಾಜ್ ಮಾತನಾಡಿ, ಸಹಕಾರ ಸಂಘಗಳ ವಾರ್ಷಿಕ ಮಹಾಸಭೆಗೆ ಸದಸ್ಯರ ಹಾಜರಾತಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ ಎಂಬ ಅಪವಾದಕ್ಕೆ ಉತ್ತರ ಸಿಕ್ಕಿದೆ. ನಮ್ಮ ತಾಲೂಕು ಸೊಸೈಟಿ ಮಹಾಸಭೆಗೆ ಸಾವಿರಾರು ಸಂಖ್ಯೆಯಲ್ಲಿ ಸರ್ವಸದಸ್ಯರೂ ಹಾಜರಾಗುವ ಮೂಲಕ ಸಂಘದ ಒಗ್ಗಟ್ಟನ್ನು ಎತ್ತಿ ತೋರಿಸಿ, ಸಲಹೆ ಸೂಚನೆಗಳನ್ನು ನೀಡಿರುವುದು ಮಾದರಿ ಎಂದರು.


ಸಂಘದ ಅಧ್ಯಕ್ಷ ಎ.ದೇವರಾಜ್ ಮಾತನಾಡಿ, ಟಿಎಪಿಸಿಎಂಎಸ್ ಜನತಾ ಬಜಾರ್‌ನಲ್ಲಿ ರೈತರಿಗಾಗಿ ಕೀಟನಾಶಕ, ಔಷಧ, ರಾಸಾಯನಿಕ ಮಳಿಗೆ ಹಾಗೂ ಇ-ಸ್ಟಾಂಪ್ ಪ್ರಾರಂಭಿಸಲಾಗಿದೆ. ರೈತರು ಹೆಚ್ಚಾಗಿ ಸಹಕಾರಿ ಸಂಘಗಳಲ್ಲಿ ವ್ಯವಹಾರ ನಡೆಸಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ರಮೇಶ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಮಂಡಿಬೆಲೆ ರಾಜಣ್ಣ, ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ಹುರುಳುಗುರ್ಕಿ ಶ್ರೀನಿವಾಸ್, ಬಮುಲ್ ನಿರ್ದೇಶಕ ಬಿ.ಶ್ರೀನಿವಾಸ್, ದೊಡ್ಡಸಣ್ಣೆ ಮುನಿರಾಜು, ರಮೇಶ್, ಯಂಬ್ರಹಳ್ಳಿ ರವಿ, ಟಿಎಪಿಸಿಎಂಎಸ್ ನಿರ್ದೇಶಕರಾದ ಕೆ.ರಮೇಶ್, ಎಂ.ಗಂಗಾಧರ್, ಎನ್.ರಾಮಮೂರ್ತಿ, ಜಿ.ಮುನಿರಾಜು, ಸಿ.ಮುನಿರಾಜು, ಚನ್ನಕೃಷ್ಣಪ್ಪ, ಕೆ.ಶಿವಣ್ಣ, ಕೆ.ಮಂಜುನಾಥ, ಆರ್.ಚಂದ್ರೇಶೇಖರ್, ಪ್ರಭಾರ ಕಾರ್ಯದರ್ಶಿ ನಾರಾಯಣಸ್ವಾಮಿ ಇದ್ದರು.