ಜಿಲ್ಲೆ

ಸಹಕಾರ ಸಂಘದಲ್ಲಿ ಅನ್ಯ ಸಮುದಾಯದವರಿಗೂ ಅವಕಾಶ ನೀಡಬೇಕು:ಕೆ.ಎನ್.ರಾಜಣ್ಣ

ಹಾಸನ: ಸರ್ಕಾರದ ಅನುಮತಿ ಪಡೆದು ಕಾರ್ಯಚಟುವಟಿಕೆ ನಡೆಸುವ ಸಮುದಾಯಗಳ ಸಹಕಾರ ಸಂಘಗಳಲ್ಲಿ ಅನ್ಯ ಸಮುದಾಯದವರಿಗೂ ನಾಮನಿರ್ದೇಶಿತ ಸದಸ್ಯತ್ವ ನೀಡುವಂತೆ ಕಾನೂನು ಜಾರಿಗೊಳಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಕೋ ಆಪರೇಟಿವ್ ಸೊಸೈಟಿ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಸೊಸೈಟಿ ಮೊದಲ ವರ್ಷಾಚರಣೆ, ಪ್ರತಿಭಾ ಪುರಸ್ಕಾರ ಹಾಗು ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಸಹಕಾರ ಸಂಘಗಳಿವೆ. ಕೆಲವು ಜಾತಿ, ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದು ಬೇರೆಯವರಿಗೆ ಸದಸ್ಯತ್ವ ನೀಡುವುದಿಲ್ಲ. ಆದ್ದರಿಂದ ಕಾನೂನಿಗೆ ತಿದ್ದುಪಡಿ ತರಲು ನಿರ್ಧರಿಸಿದ್ದು ಶೀಘ್ರದಲ್ಲೇ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಆದೇಶ ಹೊರಡಿಸಲಾಗುವುದು ಎಂದರು.
ಹಾಸನದಲ್ಲಿ ಆರಂಭವಾಗಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಕೋ ಆಪರೇಟಿವ್ ಸೊಸೈಟಿ ಉತ್ತಮ ಕೆಲಸಗಳನ್ನು ಹಮಿಕೊಳ್ಳುತ್ತಿದೆ. ಸೊಸೈಟಿಗೆ ನಿವೇಶನ ನೀಡಲು ಸರ್ಕಾರ ಬದ್ದವಾಗಿದ್ದು ಸೂಕ್ತ ಜಾಗ ಹುಡುಕಲು ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು.
ಸಹಕಾರ ಸಂಘಗಳನ್ನು ಸ್ಥಾಪಿಸುವುದು ಸುಲಭ. ಆದರೆ ಯಾವ ಸಮಸ್ಯೆಯಾಗದಂತೆ ಮುಂದುವರಿಸಿಕೊಂಡು ಹೋಗುವುದು ಕಷ್ಟದ ಕೆಲಸ. ನಾನು ಸಹ 1972ರಲ್ಲಿ ಸಹಕಾರ ಸಂಘದ ಮೂಲಕ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟಿದ್ದೇನೆ. ಸಂಘಗಳು ಸರ್ವ ಸಮುದಾಯದ ಏಳಿಗೆಗೆ ಶ್ರಮಿಸಬೇಕು. ಆ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ಶಾಸಕ ಎಚ್.ಪಿ.ಸ್ವರೂಪ್ ಅವರು ಮಾತನಾಡಿ, ಪ್ರಾಥಮಿಕ ಶಾಲಾ ಶಿಕ್ಷಕರು ಹಳ್ಳಿಗಳಲ್ಲಿ ಮನೆ ಮನೆಗೆ ತಿರುಗಿ ಮಕ್ಕಳನ್ನು ಶಾಲೆಗೆ ಕರೆತರುವ ಮೂಲಕ ಸರ್ಕಾರಿ ಶಾಲೆ ಉಳಿವಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಕೋ ಆಪರೇಟಿವ್ ಸೊಸೈಟಿಯಿಂದ ಶಿಕ್ಷಕರಿಗೆ ಸಾಲ ಸೌಲಭ್ಯ ನೀಡುತ್ತಿದ್ದು, ಇನ್ನು ದೊಡ್ಡ ಮಟ್ಟದಲ್ಲಿ ಸೊಸೈಟಿ ಬೆಳೆಯಬೇಕು. ಸಂಘಕ್ಕೆ ನಗರದಲ್ಲಿ ಸಿಎ ನಿವೇಶನ ದೊರಕಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೆ?ನೆ. ಜಿಲ್ಲೆಯಲ್ಲಿ ಒಟ್ಟು 6 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಈ ಸೊಸೈಟಿಗೆ ಕೇವಲ 1300 ಶಿಕ್ಷಕರು ಷೇರುದಾರರಾಗಿದ್ದಾರೆ. ಮುಂದಿನ ದಿನಗಳಲ್ಲಿ ಸೊಸೈಟಿ ಉನ್ನತವಾಗಿ ಬೆಳೆಯಲ್ಲಿಅದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಸೊಸೈಟಿ ಜಿಲ್ಲಾಧ್ಯಕ್ಷ ಡಿ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಇತರರಿದ್ದರು.