ಬೇಲೂರು: ರೈತರ ಸಹಕಾರವಿಲ್ಲದೆ ಸಹಕಾರ ಸಂಘಗಳು ಬೆಳೆಯಲು ಸಾಧ್ಯವಿಲ್ಲ. ರೈತರು ಸಾಲ-ಸೌಲಭ್ಯಗಳನ್ನು ಪಡೆದು ಸಕಾಲಕ್ಕೆ ಮರುಪಾವತಿ ಮಾಡಿದರೆ ಇತರ ರೈತರಿಗೂ ಅನುಕೂಲವಾಗುತ್ತದೆ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲೂಕಿನ ಸನ್ಯಾಸಿಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಷೇರುದಾರರಿಗೆ ಬೆಳೆ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಂದ ಬಂದ ಹಣವನ್ನು ಸಹಕಾರ ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟು ಅದರಿಂದ ಬರುವ ಲಾಭದಲ್ಲಿ ಸಾಲ ಸೌಲಭ್ಯ ಪಡೆಯಲು ಹಾಗೂ ಬ್ಯಾಂಕಿನ ವ್ಯವಹಾರಕ್ಕೂ ಸಹಕಾರಿಯಾಗುತ್ತದೆ ಎಂದರು.
ಷೇರುದಾರರೆ ಬ್ಯಾಂಕಿನ ಬಂಡವಾಳವಾಗಿದ್ದು, ಅವರ ಸಹಕಾರವಿಲ್ಲದೆ ಬ್ಯಾಂಕ್ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಸಾಲ, ಸೌಲಭ್ಯ ಪಡೆದವರು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿದರೆ ಇತರರಿಗೂ ಅನುಕೂಲವಾಗುತ್ತದೆ. ಜಿಲ್ಲೆಯಲ್ಲಿ ಸಹಕಾರ ಬ್ಯಾಂಕುಗಳು ದಿವಾಳಿಯತ್ತ ಸಾಗಿದ್ದ ಸಂದರ್ಭದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನೀಡಿದ ಸಹಕಾರ ಅನನ್ಯ ಎಂದು ಮೆಚ್ಚುಗೆ ನುಡಿಗಳನ್ನಾಡಿದರು.
ಪ್ರಾಥಮಿಕ ಪತ್ತಿನ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ನಿರ್ದೇಶಕರ ಸಹಕಾರದ ಜತೆಗೆ ಬ್ಯಾಂಕಿನಲ್ಲಿ ಷೇರುದಾರರ ನೆರವಿನಿಂದ ಬ್ಯಾಂಕ್ ಉನ್ನತ ಸ್ಥಾನದಲ್ಲಿದೆ. ಬ್ಯಾಂಕಿನಿಂದ 7.80 ಕೋಟಿ ರೂ. ಗೂ ಅಧಿಕ ಸಾಲ ನೀಡಿದ್ದು, 2022ರಲ್ಲಿ 3.50 ಲಕ್ಷ ರೂ. ಲಾಭದಲ್ಲಿದೆ. ಈಗ 82 ಜನರಿಗೆ ಬೆಳೆ ಸಾಲದ ಚೆಕ್ಕನ್ನು ನೀಡುತ್ತಿದ್ದೂ, ಸಾಲ ಮನ್ನಾಕ್ಕೆ ಕಾಯದೇ ಸಕಾಲಕ್ಕೆ ಸಾಲ ಮರುಪಾವತಿ ಮಾಡಬೇಕು ಎಂದು ತಿಳಿಸಿದರು.
ಜಿಪಂ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೆಗೌಡ, ಪ್ರಾಥಮಿಕ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಖಲಂದರ್ ಪಿರ್, ನಿರ್ದೇಶಕರಾದ ಬಸವರಾಜ್, ಕಾಂತರಾಜ್, ರೇಣುಕಾ, ಜಯಕುಮಾರ್, ಮೀನಾಕ್ಷಿ, ಕಾರ್ಯದರ್ಶಿ ಧರ್ಮೇಗೌಡ ಇತರರಿದ್ದರು.