ಜಿಲ್ಲೆ

ಸಹಕಾರ ಸಂಘಗಳು ಸ್ಥಳೀಯ ಉದ್ಯಮಶೀಲತೆಗೆ ಪ್ರೋತ್ಸಾಹಿಸಲಿ -ಸಂಪಖಂಡ ಸೊಸೈಟಿ ಶತಮಾನೋತ್ಸವ ಸ್ಪೀಕರ್‌ ಕಾಗೇರಿ ಸಲಹೆ

ವಿಜಯವಾಣಿ ಸುದ್ದಿಜಾಲ ಕಾರವಾರ
ಸಹಕಾರ ಸಂಘಗಳು ಸ್ಥಳೀಯವಾಗಿ ಉದ್ಯಮಶೀಲತೆ ಹಾಗೂ ಉದ್ಯೋಗ ಬೆಳೆಸುವತ್ತ ಗಮನ ಹರಿಸಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ತಾಲೂಕಿನ ಜಾನ್ಮನೆಯ ಸಂಪಖಂಡ ಗ್ರೂಪ್ ಸೇವಾ ಸಹಕಾರಿ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚೆಗೆ ಮಲೆನಾಡಿನ ಯುವಕರು ಶಹರ ಸೇರುತ್ತಿದ್ದಾರೆ. ವೃದ್ಧಾಶ್ರಮಗಳಿಗೆ ಬೇಡಿಕೆ ಹೆಚ್ಚಿದೆ. ಯುವಕರು ಸ್ಥಳೀಯವಾಗಿ ಇರಬೇಕು ಎಂದರೆ ಇಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು. ಅಂಗಡಿಗಳು ವಿದೇಶಿ ಉತ್ಪನ್ನ ಮಾರಾಟದ ಕೇಂದ್ರವಾಗುತ್ತಿವೆ. ಸ್ಥಳೀಯವಾಗಿ. ಸ್ಥಳೀಯರು ಇಲ್ಲಿನ ಉತ್ಪಾದನೆ ಮಾಡಿ, ಮಾರುಕಟ್ಟೆಯನ್ನು ಆವರಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಹಕಾರಿ ಸಂಘಗಳು ಮಹತ್ತರ ಪಾತ್ರ ವಹಿಸಬೇಕು ಎಂದರು.
ಸಹಕಾರಿ ಸಂಘಗಳು ಸಾಲ ನೀಡುವಿಕೆಯನ್ನೇ ಪ್ರಮುಖ ಉದ್ದೇಶವಾಗಿಸಿಕೊಳ್ಳಬಾರದು. ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸಬೇಕು. ಬೇಕಾಬಿಟ್ಟಿ ಸಾಲ ನೀಡಿ, ಅದು ಸಮಸರ್ಪಕ ಬಳಕೆ ಆಗದಿದ್ದರೆ ಕೃಷಿ ಭೂಮಿ, ಆಸ್ತಿ ಮಾರಿಕೊಳ್ಳಬೇಕಾದ ಸ್ಥಿತಿ ಬರಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.
ಸಹಕಾರಿ ಸಂಘಗಳಲ್ಲಿ ತಾವೇ ಮೇಲು ಎಂದು ಕಿರೀಟ ಹಾಕಿಕೊಂಡ ಅನೇಕ ಜಿಲ್ಲೆಗಳಿವೆ. ಆದರೆ, ನಮ್ಮ ಜಿಲ್ಲೆಯ ಸಂಘಗಳು ಮನೆಯ ಭಾಗದಂತೆ ಬೆಳೆದು ಮುಕುಟಪ್ರಾಯವಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರ ಬೆಳೆಯಲು ಸಂಪಖ<ಡ ಸೊಸೈಟಿಯ ಪಾತ್ರವೂ ಇದೆ ಎಂದರು.
ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಕೃಷಿ ಕುಟುಂಬ ಜಮೀನು ಮಾರದಂತೆ ಸಹಕಾರಿ ಸಂಘಗಳು ಎಚ್ಚರಿಕೆ ವಹಿಸಬೇಕಿದೆ. ಕುಟುಂಬ ವ್ಯವಸ್ಥೆಯ ಬಗ್ಗೆ ನಮ್ಮ ಮಕ್ಕಳಿಗೆ ಜಾಸ್ತಿ ತಿಳಿಸಬೇಕು ಎಂದರು. ಸಹಕಾರ ಸಂಘಗಳ ಸಹಾಯಕ ನಿಬಂಧಕ ಟಿ.ವಿ.ಶ್ರೀನಿವಾಸ ಇದ್ದರು.
ಸಂಘದ ಅಧ್ಯಕ್ಷ ಸುಬ್ರಾಯ ಹೆಗಡೆ ಜಾನ್ಮನೆ, 1923 ರಲ್ಲಿ ಸಂಘ ಪ್ರಾರಂಭವಾಯಿತು. ತಿಮ್ಮಯ್ಯ ಸೀತಾರಾಮ ಹೆಗಡೆ ಅವರು ಪ್ರಥಮ ಅಧ್ಯಕ್ಷರಾಗಿದ್ದರು. 27 ಜನ ಷೇರುದಾರರಿದ್ದರು. 3 ಸಾವಿರ ಷೇರು ಧನ ಸಂಗ್ರಹಿಸಿ ಸಂಘ ಆರಂಭಿಸಲಾಯಿತು. 1976 ರಲ್ಲಿ ಕಚೇರಿ ಕಟ್ಟಡವನ್ನು ನಿರ್ಮಾಣವಾಯಿತು. 1944-45 ರಿಂದ ಕಿರಾಣಿ ಪ್ರಾರಂಭಿಸಲಾಯಿತು. ರೈತರ ಕಷ್ಟ ಕಾಲದಲ್ಲಿ ಸಂಘ ಅವರ ನೆರವಿಗೆ ನಿಂತಿದೆ ಎಂದರು. ಮಮತಾ ಹೆಗಡೆ ಸಂಗಡಿಗರು ಪ್ರಾರ್ಥಿಸಿದರು. ಉಪಾಧ್ಯಕ್ಷ ನರಸಿಂಹ ಭಟ್ ಸ್ವಾಗತಿಸಿದರು. ಸಾಯಂಕಾಲ ಇಡಗುಂಜಿ ಮೇಳದಿಂದ ವಾಲಿ ಮೋಕ್ಷ ಯಕ್ಷಗಾನ ನಡೆಯಿತು.