ಮದ್ದೂರು: ಸಹಕಾರ ಸಂಘಗಳು ರೈತರಿಗೆ ವರದಾನವಾಗಿದ್ದು, ಸ್ಥಳೀಯ ರೈತರು ಹಲವು ಯೋಜನೆಗಳನ್ನು ಬಳಕೆ ಮಾಡಿಕೊಂಡು ಆರ್ಥಿಕಾಭಿವೃದ್ಧಿ ಹೊಂದುವ ಮೂಲಕ ಸ್ವಾವಲಂಬಿ ಬದುಕನ್ನು ಕಂಡುಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಶಾಸಕ ಕೆ.ಎಂ.ಉದಯ ಮೆಚ್ಚುಗೆ ವ್ಯಕ್ತಪಡಿಸಿದರು.\
ತಾಲೂಕಿನ ಕೊಪ್ಪ ಹೋಬಳಿಯ ಬೆಳತ್ತೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಚೇರಿ ಕಟ್ಟಡ ಹಾಗೂ ಅಂಗಡಿ ಮಳಿಗೆಗಳನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಆರ್ಥಿಕಾಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದು ಸ್ಥಳೀಯ ಆಡಳಿತ ಮಂಡಳಿ ಅರ್ಹ ಫಲಾನುಭವಿಗಳನ್ನು ಗುರುತಿಸಿ ಯೋಜನೆಯ ಸದುಪಯೋಗಕ್ಕೆ ಮುಂದಾಗುವಂತೆ ಸಹಕಾರ ಸಂಘಗಳು ಆರ್ಥಿಕಾಭಿವೃದ್ಧಿ ಹೊಂದಿದರೆ ರೈತರು ಆರ್ಥಿಕವಾಗಿ ಸದೃಢರಾಗುತ್ತಾರೆ ಎಂದರು.
ಸಹಕಾರ ಸಂಘಗಳಲ್ಲಿ ಪಡೆದ ಸಾಲವನ್ನು ಸಕಾಲದಲ್ಲಿ ಮರು ಪಾವತಿಸುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಕೈಜೋಡಿಸುವಂತೆ ಸ್ಥಳೀಯ ಆಡಳಿತ ಮಂಡಳಿ ಎಲೆಮರೆ ಕಾಯಂತಿರುವ ರೈತರನ್ನು ಗುರುತಿಸಿ ಸಾಲ ಸೌಲಭ್ಯದ ಜತೆಗೆ ಇನ್ನಿತರ ಸವಲತ್ತುಗಳನ್ನು ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದರು.
ಕಳೆದ ಹಲವಾರು ವರ್ಷಗಳಿಂದಲೂ ಶಿಥಿಲಾವಸ್ಥೆಯಲ್ಲಿದ್ದ ಕಟ್ಟಡವನ್ನು ಸುಮಾರು 35 ಲಕ್ಷ ರೂ.ವೆಚ್ಚದಲ್ಲಿ ನಿರ್ಮಿಸಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಬಹು ಎತ್ತರಕ್ಕೆ ಸಂಘವು ಬೆಳದು ಹಲವು ಯೋಜನೆಗಳನ್ನು ಕಲ್ಪಿಸಲೆಂದು ಹಾರೈಸಿದರು.
ಡಿ.ಸಿ.ಸಿಬ್ಯಾಂಕ್ ಅಧ್ಯಕ್ಷ ಜೋಗಿಗೌಡ ಮಾತನಾಡಿ, ಸಹಕಾರ ಸಂಘದ ಮೂಲಕ ಈಗಾಗಲೇ ಜಿಲ್ಲೆಯಾದ್ಯಂತ ಕೋಟ್ಯಂತರ ರೂ.ಸಾಲ ಸೌಲಭ್ಯ ವಿತರಿಸಿ ಸಂಘಗಳ ಅಭಿವೃದ್ಧಿ ಜತೆಗೆ ಸ್ತ್ರೀ ಶಕ್ತಿ ಸಂಘಗಳಿಗೂ ಹೆಚ್ಚಿನ ಶಕ್ತಿ ತುಂಬಿರುವುದಾಗಿ ತಿಳಿಸಿದರು.
ಜಿಲ್ಲೆಯಲ್ಲಿ ಬೆಳೆಸಾಲ 35 ಕೋಟಿ ರೂ., ಮಧ್ಯಮ ಹಾಗೂ ಇತರೆ 750 ಕೋಟಿ ರೂ., ಸ್ತ್ರೀ ಶಕ್ತಿ ಸಂಘಗಳಿಗೆ 203 ಕೋಟಿ ರೂ.ಮತ್ತು ಆಭರಣ 600 ಕೋಟಿ ರೂ.ರೂ.ವರೆಗೂ ಸಾಲ ವಿತರಿಸಿದ್ದು, ಸಾಲ ಪಡೆದ ಸಂಘಗಳು, ಸ್ತ್ರೀ ಶಕ್ತಿ ಗುಂಪುಗಳು ಸಕಾಲದಲ್ಲಿ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಬೆಳತ್ತೂರು ಸಹಕಾರ ಸಂಘದ ಅಧ್ಯಕ್ಷ ಪಿ.ಸಂದರ್ಶ ಮಾತನಾಡಿ, ಕಳೆದ ಇಪ್ಪತ್ತೊಂದು ವರ್ಷಗಳಿಂದಲೂ ಬೆಳತ್ತೂರು ಸಂಘವು ಸಾಲ ಮರು ಪಾವತಿಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಮನ್‌ಮುಲ್ ನಿರ್ದೇಶಕ ಹರೀಶ್, ಉಪಾಧ್ಯಕ್ಷ ಬಿ.ಎ.ಪಚ್ಚೆ, ಸದಸ್ಯರಾದ ಬಿ.ಎನ್.ಸುಧಾಕರ, ಎಚ್.ಜಿ.ಪ್ರಭುಲಿಂಗ, ಅನಂತರಾಮು, ಕೆಂಪಯ್ಯ, ಬಿ.ಟಿ.ವೆಂಕಟೇಶ್, ಬಿ.ಜೆ.ಮಂಜುನಾಥ್, ವೆಂಕಟರಾಮು, ಪುಟ್ಟಚನ್ನಮ್ಮ, ಗೌರಮ್ಮ, ಎಂ.ಡಿ.ಸಿ.ಸಿ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಿ.ವನಜಾಕ್ಷಿ, ಸಹಕಾರ ಸಂಘಗಳ ಉಪನಿಬಂಧಕ ಎಚ್.ಆರ್.ನಾಗಭೂಷಣ್, ಸಹಾಯಕ ನಿಬಂಧಕ ಕೆ.ಅನಿತ, ಸಹಕಾರ ಅಭಿವೃಧ್ದಿ ಅಧಿಕಾರಿ ಪಿ.ಧರಣಿಕುಮಾರ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.