ಮೈಸೂರು: ಸಹಕಾರ ಸಂಘಗಳು ಉಳಿಯಬೇಕಾದರೆ ಕಟ್ಟುನಿಟ್ಟಿನ ಆರ್ಥಿಕ ಶಿಸ್ತು ಇರಬೇಕು ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟರು.
ಮೈಸೂರು ವೈದ್ಯಕೀಯ ಮಹಾವಿದ್ಯಾಲಯದ ಅಮೃತ ಮಹೋತ್ಸವ ಭವನದಲ್ಲಿ ಭಾನುವಾರ ಆಯೋಜಿಸಿದ್ದ ದಿ ಗ್ರಾೃಜುಯೇಟ್ಸ್ ಕೋ-ಆಪರೇಟಿವ್ ಬ್ಯಾಂಕ್‌ನ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಸಾಲ ಪಡೆದುಕೊಂಡವರು ವಾಪಸ್ ನೀಡುವ ಕುರಿತು ವಿಶ್ವಾಸ ಇರಬೇಕು. ಅರ್ಹರು, ಬದ್ಧತೆಯಿಂದ ನಡೆದುಕೊಳ್ಳುವವರಿಗೆ ಸಾಲ ನೀಡಬೇಕು. ರಾಜಕೀಯ ಒತ್ತಡಗಳಿಗೆ ಒಳಗಾಗಿ ಮರುಪಾವತಿ ಮಾಡದವರಿಗೆ ಸಾಲ ನೀಡಿದರೆ ವಿಶ್ವಾಸ ಹಾಗೂ ಹಣ ಎರಡೂ ಕಳೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಹು ಎಚ್ಚರಿಕೆಯಿಂದ ನಡೆದುಕೊಂಡು ಕೋಟ್ಯಂತರ ಜನರಿಗೆ ಸಹಾಯಕವಾಗಿರುವ ಸಹಕಾರ ಕ್ಷೇತ್ರವನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಕರೊನಾ ಸಮಯದಲ್ಲಿಯೂ ಭಾರತದ ಆರ್ಥಿಕತೆ ಬೆಳೆಯಬೇಕಾದರೆ ಅದು ಸಹಕಾರ ಕ್ಷೇತ್ರದ ಭದ್ರ ಬುನಾದಿಯೇ ಕಾರಣ. ಸಹಕಾರ ಕ್ಷೇತ್ರ ಆಳವಾಗಿ ಬೇರೂರಿರುವುದರಿಂದ ಜನರ ಆರ್ಥಿಕತೆಯೂ ಸುಧಾರಣೆಯಲ್ಲಿದೆ ಎಂದು ಅಭಿಪ್ರಾಯಪಟ್ಟರು.
ಸಹಕಾರ ಕ್ಷೇತ್ರ ಎಲ್ಲರನ್ನು ಒಳಗೊಳ್ಳುವ ಮೂಲಕ ಮುನ್ನಡೆದಾಗ ಅದರ ನಿಜವಾದ ಉದ್ದೇಶ ಸಫಲವಾಗುತ್ತದೆ. ಸ್ವಾವಲಂಬನೆ ಜೀವನ ನಡೆಸಲು ಸಹಕಾರ ಕ್ಷೇತ್ರಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ಬ್ರಿಟಿಷರ ಕಾಲದಲ್ಲಿಯೇ ರಾಜ್ಯದಲ್ಲಿ ಗದಗಿನ ಕಣಗಿನಾಳದ ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲ ಅವರು ಹುಟ್ಟುಹಾಕಿದ ಸಹಕಾರ ಚಳವಳಿ ಬೃಹತ್ ಹೆಮ್ಮರವಾಗಿ ಬೆಳೆದಿದೆ ಎಂದರು.
ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಪ್ರೊ.ಎನ್.ಎಸ್. ಸುಬ್ಬರಾವ್ ಅವರು ಪದವೀಧರರ ಆರ್ಥಿಕ ಮಟ್ಟ ಸುಧಾರಿಸುವ ಸಲುವಾಗಿ ಸ್ಥಾಪಿಸಿದ ದಿ ಗ್ರಾೃಜುಯೇಟ್ಸ್ ಕೋ-ಅಪರೇಟಿವ್ ಬ್ಯಾಂಕ್ ಇಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸಾರ್ಥಕತೆಯ ಸಂಕೇತ ಎಂದು ಬಣ್ಣಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ರಾಜ್ಯದಲ್ಲಿ ಸಹಕಾರ ಚಳವಳಿ ಹುಟ್ಟಿಗೆ ಕಾರಣವಾದ ಸಿದ್ದನಗೌಡ ಪಾಟೀಲ್ ಅವರ ಹೆಸರಿನಲ್ಲಿ ಸಹಕಾರ ರತ್ನ ಪ್ರಶಸ್ತಿ ನೀಡುವ ಮೂಲಕ ಸಹಕಾರ ಕ್ಷೇತ್ರದಲ್ಲಿ ಇರುವವರು ಹಾಗೂ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸಲಾಗುತ್ತಿತ್ತು. ಆದರೆ ಇತ್ತೀಚೆಗೆ ಅದು ನಿಂತಿದ್ದು, ಮತ್ತೆ ಮುಂದುವರಿಸಬೇಕು. ಸಹಕಾರ ಕ್ಷೇತ್ರದಲ್ಲಿಯೂ ಮೀಸಲು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ರಾಜಕೀಯ ನುಸುಳದಂತೆ ನೋಡಿಕೊಳ್ಳಬೇಕು. ಸರ್ಕಾರದಿಂದ ನಾಮನಿರ್ದೇಶನಗೊಳ್ಳುವವರು ಅಧ್ಯಕ್ಷರಾಗುವಂತಿಲ್ಲ ಎನ್ನುವ ಕಾನೂನು ಜಾರಿಗೊಳಿಸಬೇಕು. ಪ್ರಕರಣಗಳ ನ್ಯಾಯಸಮ್ಮತ ಹಾಗೂ ಶೀಘ್ರ ವಿಲೇವಾರಿಗೆ ವಿಭಾಗ ಮಟ್ಟದಲ್ಲಿಯಾದರೂ ಸಹಕಾರ ನ್ಯಾಯಾಲಯಗಳನ್ನು ಸ್ಥಾಪಿಸಿ ನ್ಯಾಯಾಧೀಶರನ್ನು ನೇಮಕ ಮಾಡಬೇಕು ಎನ್ನುವ ಬೇಡಿಕೆ ಇಟ್ಟರು.
ಮೇಯರ್ ಶಿವಕುಮಾರ್ ಅವರು ಶತಮಾನೋತ್ಸವದ ಸ್ಮರಣ ಸಂಚಿಕೆ ‘ಶತಸಿರಿ’ ಬಿಡುಗಡೆಗೊಳಿಸಿದರು. ಶಾಸಕ ಟಿ.ಎಸ್.ಶ್ರೀವತ್ಸ, ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ.ರಾಜೀವ್, ಮಾಜಿ ಶಾಸಕಿ ಜೆ.ಸುನೀತಾ ವೀರಪ್ಪಗೌಡ, ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಇತರರು ಇದ್ದರು. ಬ್ಯಾಂಕ್ ಅಧ್ಯಕ್ಷ ಎನ್.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರು, ಸಹಕಾರ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಲಾಯಿತು.