ಚಿತ್ರದುರ್ಗ: ಸಹಕಾರ ಸಂಘಗಳ ಚುನಾವಣೆಗಳಲ್ಲಿ ಯಾರ ಒತ್ತಡ, ರಾಜಕೀಯ ಶಿಫಾರಸುಗಳಿಗೆ ಮಣಿಯದೆ ಸಹಕಾರಿ ಸಂಸ್ಥೆಗಳ ಅಧಿಕಾರಿಗಳು ಕೆಲಸ ಮಾಡಬೇಕೆಂದು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ಎಂ.ದ್ಯಾಮಣ್ಣ ಹೇಳಿದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಟಿಎಪಿಸಿಎಂಎಸ್ ಮತ್ತು ಪಿಕಾರ್ಡ್ ಬ್ಯಾಂಕ್‌ಗಳ ವ್ಯವಸ್ಥಾಪಕರಿಗೆ ಗುರುವಾರ ನಗರದ ಸಹಕಾರ ಭವನದಲ್ಲಿ ಆಯೋಜಿಸಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮೀಸಲಾತಿ ಮೂಲಕ ಎಲ್ಲ ವರ್ಗದ ಜನರಿಗೂ ಸಮಾನ ಅವಕಾಶ ಸರ್ಕಾರಗಳು ಒದಗಿಸಿದ್ದು, ಆಡಳಿತ ಮಂಡಳಿ ಪ್ರತಿನಿಧಿಗಳು ಸೊಸೈಟಿಗಳ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಕಾರ‌್ಯಕ್ರಮ ಉದ್ಘಾಟಿಸಿದ ಯೂನಿಯನ್ ನಿರ್ದೇಶಕ ಜಿಂಕಲು ಬಸವರಾಜು ಮಾತನಾಡಿ, ಸಹಕಾರಿ ಬ್ಯಾಂಕ್ ಮತ್ತು ಸಂಘಗಳ ಚುನಾವಣೆಗಳಲ್ಲಿ ಸದಸ್ಯರು ಮತದಾನದಿಂದ ವಂಚಿತರಾಗಬಾರದು. ಸದಸ್ಯರು ಸುಸ್ತಿದಾರರಾಗದಂತೆ ಮುಖ್ಯ ಕಾರ‌್ಯನಿರ್ವಹಣಾಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಆರ್.ಎಸ್.ದಿಲೀಪ್‌ಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾವಣೆಗೆ ಬಹಳ ಮಹತ್ವವಿದೆ. ಚುನಾವಣೆ ಸುಗಮವಾಗಿ ನಡೆಸಲು ನಿಯಮಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳ ಬೇಕಿದೆ ಎಂದರು.
ಸಹಕಾರ ಸಂಘಗಳ ಇತ್ತೀಚಿನ ತಿದ್ದುಪಡಿ ಕಾಯ್ದೆ, ಕಾನೂನು ಮುಖ್ಯಾ ಂಶ ಹಾಗೂ ಸಹಕಾರ ಸಂಘಗಳ ಚುನಾವಣೆ ನಡೆಸುವ ಕುರಿತು ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ವಿ.ಬಸವರಾಜ್ ಉಪನ್ಯಾಸ ನೀಡಿದರು.
ಯೂನಿಯನ್ ನಿರ್ದೇಶಕ ಜಿ.ಇ.ಅಜ್ಜಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಪಾಟೀಲ್, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಮಹೇಶ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ದಾದಾವಲಿ ಬಂಕಾಪುರ, ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲೂಕುಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಟಿಎಪಿಸಿಎಂಎಸ್ ಮತ್ತು ಪಿಕಾರ್ಡ್ ಬ್ಯಾಂಕ್‌ಗಳ ವ್ಯವಸ್ಥಾಪಕರು ಇದ್ದರು.
ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.