ಚಾಮರಾಜನಗರ: ಸಹಕಾರ ಸಂಘಗಳ ರಚನೆ ಮತ್ತು ಕಾರ್ಯ ವಿಸ್ತರಣೆಯಿಂದ ಹಳ್ಳಿಗಳ ಪ್ರಗತಿಯಾಗುತ್ತಿವೆ ಎಂದು ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಹಾಗೂ ಚಾಮುಲ್ ನಿರ್ದೇಶಕ ಎಚ್.ಎಸ್. ನಂಜುಂಡಪ್ರಸಾದ್ ತಿಳಿಸಿದರು.
ನಗರದ ಲ್ಯಾಂಪ್ಸ್ ಸಹಕಾರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ , ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಸಹಕಾರ ಇಲಾಖೆಯ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರಿಗೆ ಆಡಳಿತ ನಿರ್ವಹಣೆ ಬಗ್ಗೆ ತರಬೇತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇತರೆ ಸಹಕಾರ ಸಂಘಗಳ ಕಾರ್ಯವ್ಯಾಪ್ತಿಯು ಬಹಳ ವಿಸ್ತಾರವಾಗಿದ್ದು, ಸಂಘದಿಂದ, ಮೀನುಗಾರರು, ನೇಕಾರರು, ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆ ಸೇರಿದಂತೆ ಹತ್ತು ಹಲವಾರು ಸಹಕಾರ ಸಂಘಗಳು ಕುಲ ಕಸುಬು ಅಭಿವೃದ್ದಿ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇತರೇ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಾರ್ಯದರ್ಶಿಗಳು ಹಾಗೂ ಅಧ್ಯಕ್ಷರು ಮತ್ತು ನಿರ್ದೆಶಕರು ಸಹಕಾರ ಸಂಘಗಳ ಕಾಯ್ದೆಗಳು ಹಾಗೂ ಕಾರ್ಯ ವಿಧಾನಗಳ ಬಗ್ಗೆ ತಿಳಿದುಕೊಂಡು ಜಾಗೃತರಾಗಬೇಕು ಎಂದು ತಿಳಿಸಿದರು.
ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಎಂ. ಬಸವಣ್ಣ ಮಾತನಾಡಿ, ಸಹಕಾರಿ ಕ್ಷೇತ್ರವು ಅತ್ಯಂತ ಬಲಿಷ್ಟವಾಗಿದ್ದು, ಈ ಮೂಲಕ ಪ್ರತಿಯೊಬ್ಬರು ಆರ್ಥಿಕ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶವಿದೆ. ಸಹಕಾರ ಸಂಘಗಳ ಮುಲಕ ರ್ದುಬಳರ ಅಭಿವೃದ್ದಿ ಮಾಡುವ ಅವಕಾಶಗಳು ಹೆಚ್ಚಿವೆ. ಬಹಳಷ್ಟು ಸವಲತ್ತುಗಳು ದೊರೆಯುತ್ತವೆ ಎಂದರು.
ಜಿಲ್ಲಾ ಸಹಕಾರ ಸಂಘಗಳು ಉಪನಿಬಂಧಕಿ ಜ್ಯೋತಿ ಅರಸು ಮಾತನಾಡಿ, ಸಹಕಾರ ಸಂಘಗಳ ಮೂಲಕ ಯಶಸ್ವಿನಿ ವಿಮೆ ಯೋಜನೆ ನೊಂದಾಣಿ ಪ್ರಕ್ರಿಯೆ ನಡೆಯುತ್ತಿದ್ದು, ಎಲ್ಲಾ ಸಂಘಗಳು ತಮ್ಮ ಸದಸ್ಯರು ಮತ್ತು ಅವರ ಕುಟುಂಬವನ್ನು ಯಶಸ್ವಿನಿ ವಿಮೆಗೆ ಸೇರ್ಪಡೆ ಮಾಡುವಂತೆ ತಿಳಿಸಿದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ. ನಾಗರಾಜು, ಅಮಚವಾಡಿ ನಾಗಸುಂದರ, ಮೈಸೂರಿನ ಕೆಐಸಿಎಂ ಪ್ರಾಂಶುಪಾಲ ಪುಟ್ಟಸ್ವಾಮಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಮನುಜ, ಮ್ಯಾನೇಜರ್ ಮಲ್ಲಿಕಾರ್ಜುನ, ಮಲ್ಲೇಶ್, ಕೆಂಡಗಣ್ಣ ಮತ್ತು ಇತರರು ಇದ್ದರು.