ತ್ಯಾಗರ್ತಿ: ಸಹಕಾರ ಕ್ಷೇತ್ರದಲ್ಲಿ ಇರುವವರು ರೈತರ ಧ್ವನಿಯಾಗಿ ಕೆಲಸ ಮಾಡಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ತ್ಯಾಗರ್ತಿ ಪಟ್ಟಣದಲ್ಲಿ ಡಿಸಿಸಿ ಬ್ಯಾಂಕ್ ನೂತನ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿ, ಜನರು ಹೆಚ್ಚಿನ ಬಡ್ಡಿ ಆಸೆಗೆ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಇದಕ್ಕೆ ಯಾವುದೇ ಭದ್ರತೆ ಇರುವುದಿಲ್ಲ. ಇದರಿಂದ ನಷ್ಟ ಸಂಭವಿಸಿದರೆ ಜನರೇ ಹೊಣೆ ಹೊರಬೇಕು. ಸಹಕಾರ ಬ್ಯಾಂಕ್‌ಗಳಲ್ಲಿ ರಾಜಕೀಯ ಮಾಡಬಾರದು. ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.
ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಆರ್.ಜಯಂತ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರು ಪ್ರಾಮಾಣಿಕವಾಗಿ ಇರಬೇಕು. ರೈತರ ಬಗ್ಗೆ ಕಾಳಜಿ ಹೊಂದಿರಬೇಕು ಎಂದು ತಿಳಿಸಿದರು.
ಶಿವಮೊಗ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಾಜನ್ ರೆಡ್ಡಿ ಮಾತನಾಡಿ, ರಾಜ್ಯದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಎರಡನೇ ಸ್ಥಾನದಲ್ಲಿದ್ದು, 2024-25ನೇ ಸಾಲಿನಲ್ಲಿ 36 ಕೋಟಿ ಲಾಭ ಗಳಿಸಿದೆ. ಮುಂದಿನ ದಿನಗಳಲ್ಲಿ ಪಶುಸಂಗೋಪನೆ, ಸ್ವಸಹಾಯ ಸಂಘಗಳ ಮೂಲಕ ರೈತರಿಗೆ 1660 ಕೋಟಿ ನೀಡುವ ಗುರಿ ಹೊಂದಲಾಗಿದೆ ಎಂದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಸನ್ಮಾನಿಸಲಾಯಿತು. ತ್ಯಾಗರ್ತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಕೆ.ಹನುಮಂತಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ದಶರಥಗಿರಿ, ಪರಮೇಶ್ವರ, ಗ್ರಾಪಂ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಇಡುವಳ್ಳಿ ಚರ್ಚ್ ಧರ್ಮಗುರು ಥಾಮಸ್, ಜಿಪಂ ಮಾಜಿ ಸದಸ್ಯೆ ಅನಿತಾ ಕುಮಾರಿ, ಬರೂರು ಗ್ರಾಪಂ ಅಧ್ಯಕ್ಷ ರಮೇಶ, ಪ್ರಮುಖರಾದ ಸೋಮಶೇಖರ್ ಲಾವಿಗ್ಗೆರೆ, ಚೇತನ್ ರಾಜ್ ಕಣ್ಣೂರು, ಕಿರಣ್ ದೊಡ್ಮನೆ, ರೇಣುಕಾ, ಉಷಾ , ಬಿ.ಎಸ್. ವೀರೇಶ್, ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ನಾಗಭೂಷಣ್ ಇತರರಿದ್ದರು.