ಜಿಲ್ಲೆ

ಸಹಕಾರ ತತ್ವದಡಿ ವೈದ್ಯಕೀಯ ವೆಚ್ಚ ತಗ್ಗಿಸಲು ಕ್ರಮ ಅಗತ್ಯ: ಡಾ.ನಾಗೇಂದ್ರಸ್ವಾಮಿ

ಮೈಸೂರು: ದುಬಾರಿಯಾಗಿರುವ ವೈದ್ಯಕೀಯ ವೆಚ್ಚ ತಗ್ಗಿಸಲು ಸಹಕಾರ ತತ್ವದಡಿ ವೈದ್ಯಕೀಯ ಕ್ಷೇತ್ರ ಕಾರ್ಯನಿರ್ವಹಿಸಬೇಕಿದೆ ಎಂದು ಬೆಂಗಳೂರಿನ ಎಂ.ಎಸ್.ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಅಧ್ಯಕ್ಷ ಡಾ.ನಾಗೇಂದ್ರಸ್ವಾಮಿ ಸಲಹೆ ನೀಡಿದರು.

ಅಂತಾರಾಷ್ಟ್ರೀಯ ಲಿಂಗಾಯತ ಯೂತ್ ಫೋರಂ ವತಿಯಿಂದ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಗ್ಲೋಬಲ್ ಬಿಜಿನೆಸ್ ಕಾನ್‌ಕ್ಲೇವ್ ಸಮಾವೇಶದಲ್ಲಿ ಶನಿವಾರ ‘ವೈದ್ಯಕೀಯ ನಾಯಕತ್ವ’ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ರಾಜ್ಯದಲ್ಲಿರುವ ಎಲ್ಲ ವೈದ್ಯಕೀಯ ಸಂಸ್ಥೆಗಳು ಪ್ರತ್ಯೇಕವಾಗಿ ವೈದ್ಯಕೀಯ ಉಪಕರಣ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸುತ್ತವೆ. ಇದು ದುಬಾರಿಯಾಗಿದ್ದು, ಶೇ.13ರಷ್ಟು ವೆಚ್ಚವಾಗಲಿದೆ. ಅದೇ ಎಲ್ಲ ಸಂಸ್ಥೆಗಳು ಒಂದೇ ಕಂತಿನಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರೆ ದರ ಕಡಿಮೆಯಾಗಿ ವೆಚ್ಚವೂ ತಗ್ಗಲಿದೆ ಎಂದರು.

ಆಸ್ಪತ್ರೆಯಲ್ಲಿ ಬಳಕೆ ಮಾಡುವ ಕೈಗವಸುಗಳು ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ಖರೀದಿ ಮಾಡಿದರೆ 5 ರೂ. ಕೊಡಬೇಕು. ಲಕ್ಷಾಂತರ ಕೈಗವಸಗಳು ಒಂದೇ ಸಲಕ್ಕೆ ಖರೀದಿಸಿದರೆ ದರ ಅರ್ಧದಷ್ಟು ಕಡಿಮೆಯಾಗಲಿದೆ. ಈ ಪ್ರಯೋಗದಿಂದ ಆಸ್ಪತ್ರೆಗಳಿಗೂ ಹೊರೆ ಕಡಿಮೆಯಾಗಿ ವೈದ್ಯಕೀಯ ವೆಚ್ಚವನ್ನು ಗಣನೀಯವಾಗಿ ತಗ್ಗಿಸಿ ಉತ್ತಮ ಆರೋಗ್ಯ ಸೇವೆಯನ್ನು ಸಾರ್ವಜನಿಕರಿಗೆ ಕಲ್ಪಿಸಿಕೊಡಬಹುದಾಗಿದೆ ಎಂದು ಹೇಳಿದರು.

ವೈದ್ಯಕೀಯ ವಸ್ತುಗಳ ಖರೀದಿಗೆ ರಾಜ್ಯದ ದೊಡ್ಡ ವೈದ್ಯಕೀಯ ಸಂಸ್ಥೆಗಳು ಒಂದೇ ವೇದಿಕೆ ಸಂಘಟನೆಯಾಗಿ ಸಹಕಾರ ತತ್ವದಡಿ ಕಾರ್ಯಾಚರಣೆ ನಡೆಸಬೇಕು. ಇದರಿಂದ ವೈದ್ಯಕೀಯ ಕ್ಷೇತ್ರದ ಮತ್ತಷ್ಟು ಪ್ರಗತಿಗೆ ನೆರವಾಗಲಿದೆ ಎಂದರು.

ವೈದ್ಯಕೀಯ ಸಂಪನ್ಮೂಲವನ್ನು ಪರಸ್ಪರ ಹಂಚಿಕೆ ಮಾಡಿಕೊಳ್ಳಬೇಕು. ರಾಜ್ಯದ 2ನೇ, 3ನೇ ಹಂತದ ನಗರದಲ್ಲಿ ವೈದ್ಯಕೀಯ ಮಾನವ ಸಂಪನ್ಮೂಲ ಕೊರತೆ ಇದೆ. ಹೀಗಾಗಿ, ವಿವಿಧ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಜ್ಞ ವೈದ್ಯರು ಅಗತ್ಯವಿರುವ ಕಡೆ ಕೆಲಸ ಮಾಡುವಂತಾಗಬೇಕು. ಇದರಿಂದ ಎಲ್ಲೆಡೆ, ಎಲ್ಲ ಕಡೆಗೂ ವೈದ್ಯಕೀಯ ಸೇವೆ ಸುಲಭವಾಗಿ ದೊರೆಯುವಂತೆ ಮಾಡಬಹುದು. ಇದರ ನೇರ ಲಾಭ ರೋಗಿಗಳಿಗೆ ದೊರೆಯಲಿದೆ ಎಂದರು.

ಸ್ಕಾೃನಿಂಗ್, ಬಿಪಿ, ರಕ್ತ ಪರೀಕ್ಷೆ ಸೇರಿದಂತೆ ವಿವಿಧ ಪರೀಕ್ಷೆಗೆ ಶಿಫಾರಸು ಮಾಡಿದಾಗ ವೈದ್ಯರು ಕಿಕ್‌ಬ್ಯಾಕ್ ಪಡೆದುಕೊಳ್ಳುತ್ತಾರೆ ಎಂಬ ಆರೋಪವಿದೆ. ಈ ಕಳಂಕ ತೊಳೆದುಕೊಳ್ಳಬೇಕು. ವೈದ್ಯರೇ ಡಯಾಗ್ನೋಸ್ಟಿಕ್ ಕೇಂದ್ರ ಸ್ಥಾಪಿಸಿ ಅತಿ ಕಡಿಮೆ ದರ ನಿಗದಿಪಡಿಸಬೇಕು. ಈ ಪ್ರಯೋಗ ಶಿವಮೊಗ್ಗದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ ಎಂದರು.

ಆರೋಗ್ಯ ಮತ್ತು ಶಿಕ್ಷಣ ಸಮಾಜಕ್ಕೆ ಅತಿ ಅಗತ್ಯ. ಇವುಗಳೆರಡು ಶ್ರೇಷ್ಠ ವೃತ್ತಿಗಳು. ಲಿಂಗಾಯತ ಸಮುದಾಯದಾಚೆಯೂ ಎಲ್ಲ ಸಮುದಾಯದವರಿಗೂ ಸೌಲಭ್ಯ, ಸಹಾಯ, ಅನುಕೂಲ ಕಲ್ಪಿಸಿಕೊಡಲು ಆಲೋಚಿಸಬೇಕಿದೆ ಎಂದರು.

ಪೋರ್ಟಿಸ್ ಗ್ರೂಪ್ ಆಫ್ ಹಾಸ್ಟಿಟಲ್ಸ್ ಚೇರ್ಮನ್ ಡಾ.ವಿವೇಕ್ ಜವಳಿ ಮಾತನಾಡಿ. ಕರ್ನಾಟಕದಲ್ಲಿರುವ ವೀರಶೈವ ಲಿಂಗಾಯತರು ಲಿಂಗಾಯತರಾಗಿ ಉಳಿದಿಲ್ಲ. ಅವರು ವಿವಿಧ ಪಂಗಡವಾಗಿ ಹರಿದು ಹಂಚಿಹೋಗಿದ್ದಾರೆ. ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲೂ ಲಿಂಗಾಯತರು ಇದ್ದಾರೆ. ಅವರ‌್ಯಾರು ಕರ್ನಾಟಕದಂತೆ ವಿಭಜನೆಗೊಂಡಿಲ್ಲ. ಇಲ್ಲಿ 22 ಭಿನ್ನ ಮಠಗಳಿವೆ. ಜಾತಿರಹಿತ ಸಮಾಜ ಎಂಬ ಬಸವಣ್ಣ ಅವರ ಆಶಯ ಛಿದ್ರವಾಗಿದೆ. ಲಿಂಗಾಯತರೆಲ್ಲರೂ ಒಂದಾಗಬೇಕು ಎಂದರು.

ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪನೆಯ ಹಿಂದಿನ ಪರಿಶ್ರಮವನ್ನು ಹಂಚಿಕೊಂಡ ಅವರು, ವೈದ್ಯಕೀಯ ವಿದ್ಯಾರ್ಥಿಗಳು ಕೌಶಲ, ಕಠಿಣ ಪರಿಶ್ರಮ, ಮೌಲ್ಯ, ರಾಜಿರಹಿತ ವರ್ತನೆ, ಚೌಕಟ್ಟಿನಾಚೆ ಆಲೋಚನೆ ಮತ್ತು ಒಗ್ಗಟ್ಟು ಮೈಗೂಡಿಸಿಕೊಳ್ಳಬೇಕು.

ವೈದ್ಯಕೀಯ ಕ್ಷೇತ್ರದಲ್ಲಿ ಔದ್ಯೋಗಿಕ ಮತ್ತು ಉದ್ಯೋಗ ಅವಕಾಶ ವಿಪುಲವಾಗಿವೆ. ತ್ವರಿತವಾಗಿ ಬದಲಾವಣೆಯಾಗುತ್ತಿರುವ ವೈದ್ಯಕೀಯ ಕ್ಷೇತ್ರಕ್ಕೆ ಹೊಂದಿಕೊಂಡು ಕೌಶಲ, ಬುದ್ಧಿಮತ್ತೆಯನ್ನು ಉನ್ನತೀಕರಣಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃತಕ ಅಂಗ ಕಸಿ, ರೋಬಾಟಿಕ್ ಶಸ್ತ್ರಚಿಕಿತ್ಸೆ, ಟೆಲಿ ರೋಬಾಟಿಕ್, ಕೃತಕ ಬುದ್ಧಿಮತ್ತೆ(ಎಐ) ತಂತ್ರಜ್ಞಾನ, ನ್ಯಾನೋ ಟೆಕ್ನಾಲಜಿ ವೈದ್ಯಕೀಯ ಕ್ಷೇತ್ರವನ್ನು ಭವಿಷ್ಯದಲ್ಲಿ ಆಳಲಿದೆ. ಹೀಗಾಗಿ, ವೈದ್ಯರು, ಆಸ್ಪತ್ರೆಗಳು ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸದೆ ಒಂದು ತಂಡವಾಗಿ ಕೆಲಸ ಮಾಡಲು ಸಜ್ಜಾಗುವುದು ತುರ್ತು ಅಗತ್ಯ ಎಂದರು.

ವೈದ್ಯಕೀಯ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಶೇ.50ರಷ್ಟು ಆಗುವ ಸಾಧ್ಯತೆ ಇದೆ. ಹೀಗಾದರೆ, ಸಿಂಗಪುರದಲ್ಲಿ ಉಂಟಾದ ದುರಂತ ಭಾರತದಲ್ಲೂ ಆಗಲಿದೆ. ಹೀಗಾಗಿ, ವೈದ್ಯಕೀಯ ಕ್ಷೇತ್ರದವರೆಲ್ಲರೂ ಒಂದಾಗದಿದ್ದರೆ ಭವಿಷ್ಯದಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಡಾ.ಎಚ್.ಎಸ್.ನರೇಂದ್ರ ಮಾತನಾಡಿ, ವೈದ್ಯಕೀಯ ಅಭ್ಯರ್ಥಿಗಳು ಐಎಎಸ್ ಆಗಲು ಬರುತ್ತಾರೆ. ನೇರ ನೇಮಕಾತಿ (ಲ್ಯಾಟರಲ್ ಎಂಟ್ರಿ) ಮೂಲಕ ಕೆಎಎಸ್ ಅಧಿಕಾರಿಗಳು ಐಎಎಸ್ ಅಧಿಕಾರಿಯಾಗಿ ನೇಮಕಾತಿಯಾಗಲು ಅವಕಾಶವಿದೆ. ಇದನ್ನು ಬಳಕೆ ಮಾಡಿಕೊಳ್ಳಬೇಕು ಎಂದರು.

ಕೆಪಿಸಿಸಿ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಪಾರದರ್ಶಕತೆ ತರಲಾಗಿದೆ. ವಿವಿಧ ಹುದ್ದೆಗಳ ನೇಮಕಾತಿಗೆ ಗ್ರಾಮಾಂತರ, ತಾಲೂಕು ಪ್ರದೇಶಗಳಿಂದ ಹೆಚ್ಚು ಅರ್ಜಿಗಳು ಬರುತ್ತಿವೆ. ಆದರೆ, ನಗರ ಪ್ರದೇಶದವರು ಈ ರೀತಿಯ ಉತ್ಸಾಹ ತೊರುತ್ತಿಲ್ಲ ಎಂದು ಹೇಳಿದರು.

ನಾಯಕತ್ವದ ಕುರಿತು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ.ಬಸವನಗೌಡಪ್ಪ ಮಾತನಾಡಿದರು. ಐಸಿಎಟಿಟಿ ಫೌಂಡೇಷನ್‌ನ ಮುಖ್ಯಸ್ಥೆ ಡಾ.ಶಾಲಿನಿ ನಲ್ವಾಡ್ ಗೋಷ್ಠಿಯನ್ನು ನಿರ್ವಹಣೆ ಮಾಡಿದರು.