ಹೊಸನಗರ: ರಾಷ್ಟ್ರೀಯ ಬ್ಯಾಂಕ್‌ಗಳ ನಡುವೆ ಬಡ ರೈತರಿಗೆ ಆರ್ಥಿಕ ಚೈತನ್ಯ ನೀಡುವ ಆಶಯದೊಂದಿಗೆ ಅಸ್ತಿತ್ವಕ್ಕೆ ಬಂದ ಸಹಕಾರ ಕ್ಷೇತ್ರದಲ್ಲಿ ಇತ್ತೀಚಿನ ದಿನದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿರುವುದು ಅಪಾಯಕಾರಿ ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಬಟ್ಟೆಮಲ್ಲಪ್ಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪವನ್ನು ಉದ್ಘಾಟಿಸಿ ಮಾತನಾಡಿದರು. ಸಹಕಾರ ಕ್ಷೇತ್ರದ ಅಸ್ತಿತ್ವ ಮತ್ತು ಪರಿಣಾಮಕಾರಿ ಬೆಳವಣಿಗೆಗೆ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಕೊಡುಗೆ ಅನನ್ಯ ಎಂದರು.
ಬೇರೆ ರಾಜಕೀಯ ಕ್ಷೇತ್ರಗಳಲ್ಲಿರುವಂತೆ ಸಹಕಾರ ಕ್ಷೇತ್ರದಲ್ಲಿ ವಿರೋಧ ಪಕ್ಷವಿಲ್ಲ. ಇಲ್ಲಿ ಚುನಾಯಿತರಾಗುವ ಪ್ರತಿಯೊಬ್ಬರು ಕೂಡ ಆಡಳಿತ ಮಂಡಳಿ ಸದಸ್ಯರೇ ಆಗಿರುತ್ತಾರೆ. ಇದರ ಉದ್ದೇಶ ಯಾವುದೇ ವಿರೋಧವಿಲ್ಲದೆ ಎಲ್ಲರೂ ಸಹಕಾರಿ ಕ್ಷೇತ್ರವನ್ನು ಮುನ್ನೆಡೆಸುವುದು ಎಂದು ಹೇಳಿದರು.
ಜಿಲ್ಲಾ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಚೇರಿಗೆ ಹೋಗಿ ಆಸನದಲ್ಲಿ ಕುಳಿತಾಗ ಕುರ್ಚಿ ಒಳಭಾಗ ಕೆಳಗೆ ಹೋಗಿತ್ತು. ಆಗ ಕಾರಿನ ದಿಂಬು ತಂದು ಹಾಕಿ ಕೂತಿದ್ದೆ. ಆದರೆ ಇಂದು ಏನಾಗಿದೆ. ಹಿಂದೆ ನೌಕರರಿಗೆ ಒಂದು ಟಿವಿಎಸ್ ಬೈಕ್ ಇರಲಿಲ್ಲ. ಇಂದು ಕಾರಿನಲ್ಲೇ ಓಡಾಡುತ್ತಿದ್ದಾರೆ. ಸಹಕಾರ ಕ್ಷೇತ್ರವನ್ನು ಮುನ್ನಡೆಸಿದವರ ನೆನಪೇ ಇಲ್ಲದಂತೆ ವರ್ತಿಸುತ್ತಾರೆ. ರಾಜಕೀಯ ಪಕ್ಷದ ಬೆಂಬಲಿಗ ಎಂದು ಅಧ್ಯಕ್ಷ ಸ್ಥಾನ ನೀಡುವುದು, ಪ್ರಶಸ್ತಿ, ಪುರಸ್ಕಾರ ನೀಡುವ ಹಂತಕ್ಕೆ ಸಹಕಾರ ಕ್ಷೇತ್ರ ಬಂದು ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಮಾರೋಪ ಭಾಷಣ ಮಾಡಿದ ಜಿಲ್ಲಾ ಸಹಕಾರಿ ಯೂನಿಯನ್ ಮಾಜಿ ಅಧ್ಯಕ್ಷ ವಾಟಗೋಡು ಸುರೇಶ್, ಇಂದು ಇಡೀ ದೇಶ ಸಹಕಾರದ ಆರ್ಥಿಕ ನೀತಿಯ ಮೇಲೆ ನಿಂತಿದೆ. ಸಹಕಾರಿಗಳ ಸಭೆ ಎಂದರೆ ಬೆರಳೆಣಿಕೆ ಜನರೂ ಬರುತ್ತಿರಲಿಲ್ಲ. ಆದರೆ ಇಂದು ಹಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಾವಿರಕ್ಕೂ ಹೆಚ್ಚು ಜನರು ಸೇರುತ್ತಾರೆ. ಇದು ಸಹಕಾರ ಕ್ಷೇತ್ರದ ಶಕ್ತಿ ಎಂದರು.