ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಭಾರತದ 68 ಕೋಟಿ ಮಹಿಳಾ ಜನಸಂಖ್ಯೆಯಲ್ಲಿ ಶೇ. 2ರಷ್ಟು ಮಾತ್ರ ಸಹಕಾರ ಕ್ಷೇತ್ರಕ್ಕೆ ಕೊಡುಗೆ ಸಿಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಜೆಟ್ನಲ್ಲಿ ಸಹಕಾರ ಕ್ಷೇತ್ರಕ್ಕೆ 1,75,000 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಇದನ್ನು ದುಡಿಯುವ ಬಂಡವಾಳ ಮಾಡಿಕೊಂಡು ಮಹಿಳಾ ಸಹಕಾರ ಸಂಘಗಳು ಬೆಳೆಯಬೇಕಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಎಸ್. ಸೂರ್ಯಕಾಂತ ಅರಳಿ ಹೇಳಿದರು.
ರಾಜ್ಯ ಸಹಕಾರ ಮಹಾಮಂಡಳ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ನಗರದ ರೈಲ್ವೆ ನಿಲ್ದಾಣ ಬಳಿಯ ಹೋಟೆಲ್ ಸ್ವರ್ಣ ಪ್ಯಾರಡೈಸ್ನಲ್ಲಿ ಬೆಳಗಾವಿ ವಿಭಾಗದ ಆಯ್ದ ಮಹಿಳಾ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ 1,95,000 ಮಹಿಳಾ ಸ್ವಸಹಾಯ ಗುಂಪುಗಳಿವೆ. 10 ಲಕ್ಷ ಮಹಿಳೆಯರು ಈ ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಆರ್ಥಿಕ ಸ್ಥಿತಿ ಸುಧಾರಣೆ ಆಗಿದೆ ಎಂದರು.
ಶಾಸಕಿ ಕುಸುಮಾವತಿ ಶಿವಳ್ಳಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಮಹಿಳೆಯರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸ್ವಸಹಾಯ ಗುಂಪುಗಳಿಗೆ ಸಾಲ ನೀಡಿ ಉತ್ತೇಜನ ಕೊಡುತ್ತಿದ್ದಾರೆ. ಇವರ ಸಹಭಾಗಿತ್ವದಿಂದ ಸಹಕಾರ ಕ್ಷೇತ್ರ ಇನ್ನಷ್ಟು ವಿಸ್ತಾರಗೊಂಡು ಯಶಸ್ವಿಯಾಗಲಿ ಎಂದರು.
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಜಿ.ಪಿ. ಪಾಟೀಲ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಆಗಾಗ ಕಾನೂನು ಬದಲಾವಣೆ ಹಾಗೂ ತಿದ್ದುಪಡಿಗಳು ಆಗುತ್ತಿರುತ್ತವೆ. ಇದಕ್ಕೆ ತಕ್ಕಂತೆ ಮಹಿಳಾ ಸಹಕಾರ ಸಂಘಗಳಿಗೆ ತರಬೇತಿ ನೀಡುವ ಅಗತ್ಯವಿದೆ ಎಂದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಂಕ್ರಪ್ಪ ರಾಯನಾಳ, ಉಪಾಧ್ಯಕ್ಷೆ ಗೀತಾ ಕುಂಬಿ, ಹಿರಿಯ ಸಹಕಾರಿ ವಿಜಯಲಕ್ಷ್ಮೀ ಲೂತಿಮಠ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಾಪುಗೌಡ ಪಾಟೀಲ, ರತ್ನಾ ಶೆಟ್ಟರ್, ಡಾ. ಪದ್ಮಾ ಕೃಷ್ಣಮೂರ್ತಿ, ಗಿರಿಜಾ ಪಾಟೀಲ ಇತರರು ಇದ್ದರು. ಜಿಲ್ಲಾ ಸಹಕಾರಿ ಶಿಕ್ಷಕಿ ಸವಿತಾ ಹಿರೇಮಠ ನಿರೂಪಿಸಿದರು.