ಹೊಸೂರು ಕುಮಾರ್ 
ಜಿಲ್ಲೆ

ಸಸಿಗಳ ಬೆಲೆ ಏರಿಕೆಯನ್ನು ಹಿಂಪಡೆಯಿರಿ

Ravikumara

ಹುಣಸೂರು: ಅರಣ್ಯ ಇಲಾಖೆ ವತಿಯಿಂದ ರೈತರು ಮತ್ತು ಸಾರ್ವಜನಿಕರಿಗೆ ವಿತರಣೆ ಮಾಡುವ ಸಸಿಗಳ ಬೆಲೆಯನ್ನು ದಿಢೀರನೆ ಏಳು ಪಟ್ಟು ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ರೈತ ಸಂಘ ವಿರೋಧಿಸಿದ್ದು, ದರ ಏರಿಕೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದೆ.

ಈ ಸಂಬಂಧ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಡಿಸಿಎಫ್ ಸೀಮಾ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ರೈತಸಂಘ ಮತ್ತು ಹಸಿರುಸೇನೆ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಒಂದೂವರೆ ದಶಕದಿಂದ ರಾಜ್ಯ ಸರ್ಕಾರ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸೇರಿದಂತೆ ವಿವಿಧ ಯೋಜನೆಗಳಡಿ ಅರಣ್ಯ ಸಂವರ್ಧನೆಗಾಗಿ ರೈತರಿಗೆ ಪ್ರೋತ್ಸಾಹ ಕಾರ್ಯಕ್ರಮಗಳನ್ನು ರೂಪಿಸಿ ಕಡಿಮೆ ದರದಲ್ಲಿ ಸಸಿಗಳನ್ನು ವಿತರಣೆ ಮಾಡುತ್ತಿತ್ತು. ಆದರೆ ಇದೀಗ ಇದ್ದಕ್ಕಿದ್ದಂತೆ ಸಸಿಗಳ ದರದಲ್ಲಿ ಭಾರಿ ಏರಿಕೆ ಮಾಡಿದೆ. 1 ರೂ. ಇದ್ದ 58 ಇಂಚು ಎತ್ತರದ ಸಸಿಗೆ 7 ರೂ. ಮತ್ತು 3 ರೂ.ಗಳಿದ್ದ 69 ಇಂಚು ಎತ್ತರದ ಸಸಿಗೆ 23 ರೂ. ನಿಗದಿಪಡಿಸಿದೆ.

ಅರಣ್ಯ ಸಂಪನ್ಮೂಲ ವೃದ್ಧಿ ಆಗಬೇಕೆನ್ನುವ ಸರ್ಕಾರ ಸಸಿಗಳ ದರವನ್ನು ಈ ಮಟ್ಟಕ್ಕೆ ಏರಿಸಿದಲ್ಲಿ ರೈತರಿಗೆ ಕೊಳ್ಳುವ ಶಕ್ತಿಯಿಲ್ಲ. ಅಲ್ಲದೆ ಅರಣ್ಯೀಕರಣ ಯೋಜನೆ ವಿಫಲವಾಗುವ ಸಾಧ್ಯತೆಯಿದ್ದು, ಸರ್ಕಾರ ಕೂಡಲೇ ಈ ಹಿಂದಿನ ದರವನ್ನು ಮತ್ತೆ ಜಾರಿಗೊಳಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ರೈತಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಮುಖಂಡ ಧನಂಜಯ ಇದ್ದರು