ಭಾಲ್ಕಿ: ಶಾಸಕ ಈಶ್ವರ ಖಂಡ್ರೆ ಅವರ ಮಾರ್ಗದರ್ಶನ ಮತು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.ಅವರ ಸಲಹೆಯಂತೆ ಪಟ್ಟಣದ ಸೌಂದರ್ಯ ವೃದ್ಧಿಸಿ, ಪರಿಸರ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ರಸ್ತೆ ವಿಭಜಕದಲ್ಲಿ ನೆಟ್ಟ ಗಿಡಗಳು ಉಳಿಯಬೇಕಾದರೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಹಸೀಲ್ದಾರ್ ಅಣ್ಣಾರಾವ ಪಾಟೀಲ್ ಹೇಳಿದರು.
ಪಟ್ಟಣದ ರಸ್ತೆ ವಿಭಜಕಗಳಲ್ಲಿ ನೆಟ್ಟಿರುವ ಸಸಿಗಳನ್ನು ವೀಕ್ಷಣೆ ಮಾಡಿ, ಮಾತನಾಡಿದ ಅವರು, ಆಂಧ್ರಪ್ರದೇಶದ ರಾಜಮಾಂಡ್ರಿಯಿಂದ ಫೋಕ್ಸಲೇಟ್, ತುಜಾ, ಬೋಗನವಿಲಾ, ಫಿಕಾಸ್, ಟೆಂಪಲ್ ಟ್ರೀ, ಸತ್ಪಾಣಿ ಸೇರಿ ವಿವಿಧ ನಮೂನೆಯ ಸುಮಾರು 1500 ಸಸ್ಯ ತರಿಸಿ ವಿವೇಕಾನಂದ ಚೌಕ್ನಿಂದ ಬಸವೇಶ್ವರ, ಮಹಾತ್ಮಗಾಂಧಿ, ಸುಭಾಷಚೌಕ್, ಶಿವಾಜಿ ಚೌಕ್, ಅಂಬೇಡ್ಕರ್ ವೃತ್ತ, ಜ್ಯೋತಿಭಾಫುಲೆ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಉಪನ್ಯಾಸಕರ ಬಡಾವಣೆಯ ರಸ್ತೆ ವಿಭಜಕಗಳಲ್ಲಿ ಅರಣ್ಯ ಇಲಾಖೆಯವರ ಸಹಕಾರದಿಂದ ಸಸಿಗಳನ್ನು ನೆಡಲಾಗುತ್ತಿದೆ. ನಮ್ಮ ರಸ್ತೆ ನಮ್ಮ ಗಿಡ ಎಂಬ ಭಾವನೆ ಎಲ್ಲರಲ್ಲಿ ಬರಬೇಕು ಎಂದು ಹೇಳಿದರು.
ತಹಸೀಲ್ದಾರ ಪಾಟೀಲ್ ಅವರ ಪರಿಸರ ಕಾಳಜಿಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಇತ್ತೀಚೆಗೆ ಭಾಲ್ಕಿ ತಹಸಿಲ್ ಕಚೇರಿಗೆ ಡಿಸಿ ಭೇಟಿ ನೀಡಿ ಸೌಂದರ್ಯೀಕರಣಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನಾ ಪ್ರಮಾಣ ಪತ್ರ ನೀಡಿದ್ದು, ಸ್ಮರಣೀಯ. ಡಿಎಸ್ಪಿ ಡಾ.ದೇವರಾಜ ಬಿ. ಇದ್ದರು.