ಬಾಗಲಕೋಟೆ: ತೇರದಾಳ ತಾಲ್ಲೂಕಿನ ಸಸಾಲಟ್ಟಿ ಶಿವಲಿಂಗೇಶ್ವರ ಮಠದ ಪೂಜ್ಯರು, ಮೌನಯೋಗಿ ಶಂಕರಯ್ಯ ಶ್ರೀ ಸೋಮವಾರ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ತಮ್ಮ ೭೨ನೇ ವಯಸ್ಸಿನಲ್ಲಿ ಲಿಂಗೈಕ್ಯರಾದರು.
ಶ್ರೀಗಳ ಪಾರ್ಥಿವ ಶರೀರವನ್ನು ಶ್ರೀಮಠದ ಆವರಣದಲ್ಲಿ ಇರಿಸಿ ಭಕ್ತರ ಅಂತೀಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಶಿವಲಿಂಗೇಶ್ವರ ಕೃರ್ತ ಗದ್ದುಗೆ ಇರುವ ದೇವಸ್ಥಾನದ ಹೊರಭಾಗ ಸಕಲ ವಿಧಿವಿದಾನಗಳೊಂದಿಗೆ ಅಂತ್ಯಸAಸ್ಕಾರವನ್ನು ನೆರವೇರಿಸಲಾಯಿತು. ಶೇಗುಣಶಿ ವಿರಕ್ತಮಠದ ಡಾ. ಮಹಾಂತಪ್ರಭು, ಚಿಮ್ಮಡ ವಿರಕ್ತಮಠದ ಪ್ರಭು ಶ್ರೀ, ರಬಕವಿ ಬ್ರಹ್ಮಾನಂದ ಆಶ್ರಮದ ಗುರುಸಿದ್ದೇಶ್ವರ ಶ್ರೀ, ಮುಗಳಖೋಡ ಯಲ್ಲಾಲಿಂಗೇಶ್ವರ ಮಠದ ಡಾ.ಮುರುಘರಾಜೇಂದ್ರ ಶ್ರೀ, ಶಿರಗೂರು ಕಲ್ಮೇಶ್ವರ ಆಶ್ರಮದ ಅಭಿನವ ಕಲ್ಮೇಶ್ವರ ಶ್ರೀ ಸೇರಿದಂತೆ ಹಲವು ಮಠಾಧೀಶರು, ತೇರದಾಳ ಶಾಸಕ ಸಿದ್ದು ಸವದಿ, ಮುಖಂಡ ಮುತ್ತಣ್ಣ ಹಿಪ್ಪರಗಿ ಸೇರಿದಂತೆ ಗ್ರಾಮದ ಮುಖಂಡರು, ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತರು ಶ್ರೀಗಳ ಅಂತೀಮ ದರ್ಶನ ಪಡೆದರು. ಶ್ರೀಮಠದಿಂದ ಮುಗಳಖೋಡ ರಸ್ತೆಯಲ್ಲಿರುವ ಶಿವಲಿಂಗೇಶ್ವರ ಶಾಲೆಯವರೆಗೆ ಶ್ರೀಗಳ ಪಾರ್ಥೀವ ಶರೀರವನ್ನು ಮೆರವಣಿಗೆ ಕೈಗೊಳ್ಳಲಾಯಿತು.
ಶಂಕರಯ್ಯ ಶ್ರೀ ಮೌನಯೋಗಿಯಾಗಿದ್ದು: ೧೯೫೨ರಲ್ಲಿ ಗ್ರಾಮದ ಬಸಯ್ಯ ಮಠದ ಹಾಗೂ ನೀಲಮ್ಮ ತಾಯಿಯವರ ೪ ಜನ ಸಹೋದರರಲ್ಲಿ ೨ನೇಯವರಾಗಿ ಜನಿಸಿದರು. ಆಗಲೇ ಇವರ ದೊಡ್ಡಪ್ಪರಾಗಿದ್ದ ಶಿವಲಿಂಗೇಶ್ವರರು ಅಲ್ಲಮಪ್ರಭು ಸೇವೆ ಮಾಡಿ ತಮಗಿದ್ದ ಹುಚ್ಚನ್ನು ವಾಸಿಮಾಡಿಕೊಂಡು ಬಂದು ಗ್ರಾಮದಲ್ಲಿನ ಅಡವೇಶ್ವರರ ಪೂಜೆ ಕಾಯಕದಲ್ಲಿ ತೊಡಗಿದ್ದರು. ಬಾಲ್ಯದಲ್ಲಿ ಶಂಕರಯ್ಯರನ್ನು ಸಾಲಾ ಶಿಕ್ಷಣಕ್ಕೆ ಕಳುಹಿಸದರು, ಅವರು ಹೆಚ್ಚು ಆಸಕ್ತಿ ತೋರಿಸಿದ್ದು ಶಿವಲಿಂಗೇಶ್ವರರ ಸಾಮೀಪ್ಯದಲ್ಲಿರಲು. ಹೀಗೆ ಬಾಲಕನನ್ನು ಕರೆದುಕೊಂಡು ಪೂಜೆ ಮಾಡುತ್ತ ಅವರಿಗೂ ಪೂಜಾ ವಿಧಿವಿಧಾನಗಳನ್ನು ಕಲಿಸಿದರು. ೧೯೫೮ರಲ್ಲಿ ಶಿವಲಿಂಗೇಶ್ವರರು ಕಾಲವಾದ ನಂತರ ಬಾಲಕ ಶಂಕರಯ್ಯನಲ್ಲಿದ್ದ ಪೂಜಾ ನಿಷ್ಠೆಯನ್ನು ಗಮನಿಸಿ ಗ್ರಾಮದ ಹಿರಿಯರು ಮಠಾಧಿಪತಿಯನ್ನಾಗಿ ಕಾರ್ಯನಿರ್ವಹಿಸುವಂತೆ ನೇಮಿಸಿದರು.
ಮಾತು ಕಡಿಮೆ, ಆದರೆ ಮಾತಾಡಿದ್ದೆಲ್ಲವು ಸತ್ಯವಾಗುತ್ತ ನಡೆಯಿತು. ಭಕ್ತರ ಸಂಖ್ಯೆ ಹೆಚ್ಚಾಗತೊಡಗಿತ್ತು. ಬರಗಾಲ ಹಾಗೂ ಮಳೆ ಕೊರತೆಯಾದ ದಿನಗಳಲ್ಲಿ ಗ್ರಾಮದ ಎಲ್ಲ ಗುಡಿಗಳಿಗೂ ಭಕ್ತರೊಡಗೂಡಿ ಕಾಲ್ನಡಿಗೆ ಮೂಲಕ ಸಂಚರಿಸಿ, ಪ್ರತಿ ಗುಡಿಯ ಮುಂದೆ ತಲೆ ಮೇಲೆ ನೀರು ಸುರಿದುಕೊಳ್ಳುವ ಮಡಿಸ್ನಾನ ಮಾಡಿದ ದಿನವೇ ಮಳೆಯಾಗುವ ಮೂಲಕ ಭಕ್ತರಲ್ಲಿ ಮತ್ತಷ್ಟು ನಂಬಿಕೆ ಬಲವಾಯಿತು. ಬತ್ತಿತ ಬಾವಿ, ಕೊಳವೆ ಬಾವಿಗಳಿಗೂ ತೆರಳಿ ಅಲ್ಲಿ ಶ್ರೀಮಠದಲ್ಲಿ ಪ್ರಸಾದ(ಬೂದಿ) ಎಸೆಯುವ ಮೂಲಕವೂ ನೀರು ಬರವಂತೆ ಮಾಡಿದ್ದರೆಂದು ಭಕ್ತರು ಹೇಳುತ್ತಾರೆ. ಗ್ರಾಮದ ಬಹುತೇಕರು ಕೊಳವೆ ಬಾವಿ ಕೊರೆಸುವ ಮುನ್ನ ಇವರಿಂದಲೇ ಜಾಗ ಗುರುತಿಸಿ ಅಲ್ಲಿ ಕೊರೆಸಿದ ಬಹುತೇಕ ಕೊಳವೆ ಬಾವಿಗಳಿಗೆ ಸಾಕಷ್ಟು ನೀರು ಲಭಿಸಿದೆ ಎನ್ನುತ್ತಾರೆ ಶ್ರೀಮಠದ ಭಕ್ತ ಮುತ್ತು ಮುಶಿ. ಗ್ರಾಮದ ಬಹುತೇಕ ಮನೆಗಳ ಶುಭ ಕಾರ್ಯಗಳಿಗೆ ಇವರಿಗೆ ಮೊದಲ ಪ್ರಸಾದ ವ್ಯವಸ್ಥೆ ಮಾಡಲಾಗಿರುತ್ತಿತ್ತು.
ಪ್ರಸಾದ ಸೇವನೆಗೆ ಕುಳಿತರೆಂದರೆ ಭಕ್ತರು ತಟ್ಟೆಗೆ ಹಾಕಿದಷ್ಟು ಪ್ರಸಾದವನ್ನು ಸುಮ್ಮನೆ ಸೇವಿಸುತ್ತಿದ್ದರು. ಬೇಕು ಎನ್ನುತ್ತಿರಲಲ್ಲ. ಬೇಡವೆಂದು ಹೇಳುತ್ತಿರಲಿಲ್ಲ. ಇವರ ಈ ವರ್ತನೆಯಿಂದಲೇ ಭಕ್ತರು ಇವರನ್ನು ಮೌನಮೂರ್ತಿ, ಮೌನಯೋಗಿ ಎನ್ನಲಾರಂಭಿಸಿದರು. ಯಾವುದನ್ನು ಬೇಕು ಎಂದು ಇವರು ಕೇಳುತ್ತಿರಲಿಲ್ಲ. ಗ್ರಾಮದ ಹಿರಿಯರು ಇವರ ಸಲಹೆ, ಆಶೀರ್ವಾದ ಪಡೆದ ನಂತರವೇ ಜಾತ್ರೆ, ಮದುವೆಯಂತಹ ಕಾರ್ಯಕ್ರಮಗಳನ್ನು ನಿಗದಿಗೊಳಿಸುತ್ತಿದ್ದರು. ಕೆಲ ದಿನಗಳಿಂದ ಇವರ ಆರೋಗ್ಯದಲ್ಲಿ ಏರುಪೇರಾಗುತ್ತಿರುವದನ್ನು ಅರಿತ ಅವರು ಹಿರಿಯರ ಸಲಹೆ ಪಡೆದು ಬಸಲಿಂಗಯ್ಯ ಎಂಬ ಬಾಲಕನನ್ನು ಶ್ರೀಮಠದ ಮುಂದಿನ ಮರಿದೇವರನ್ನಾಗಿಸಲು ತಿಳಿಸಿದ್ದರಂತೆ.
ಗ್ರಾಮದಲ್ಲಿಯೇ ಬಹುತೇಕ ಕಾಲ ಕಳೆದ ಇವರು ಮಠಾದೀಶರು ಪಡೆಯುವಂತಹ ಶಿಕ್ಷಣವನ್ನು ಪಡೆಯದಿದ್ದರು, ಶ್ರೀಮಠವನ್ನು ಅತ್ಯಂತ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಮೂಲಕ ಗ್ರಾಮ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು, ಜನಪ್ರತಿನಿಧಿಗಳು, ಮಠಾಧೀಶರು ಶ್ರೀಗಳ ಅಗಲಿಕೆಗೆ ಕಂಬನಿ ಮಿಡಿದರು.