ಕವಲೂರು ಶಾಲಾ ಸಂಸತ್‌ಗೆ ಆಯ್ಕೆಯಾದ ಮಕ್ಕಳು ಪ್ರಮಾಣವಚನ ಸ್ವೀಕರಿಸುತ್ತಿರುವುದು. 
ಜಿಲ್ಲೆ

ಸಂಸತ್ತಿನ ಪರಿಕಲ್ಪನೆ ಮೂಡಿಸುವ ಉದ್ದೇಶ

ಅಳವಂಡಿ: ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿಯೇ ಸಂಸತ್ತಿನ ಪರಿಕಲ್ಪನೆ ಮೂಡಿಸಿ ಶಾಸಕಾಂಗ ವ್ಯವಸ್ಥೆಯ ಬಗ್ಗೆ ತಿಳಿಸಿಕೊಡುವುದೇ ಶಾಲಾ ಸಂಸತ್ ಚುನಾವಣೆಯ ಮುಖ್ಯ ಉದ್ದೇಶ ಎಂದು ಮುಖ್ಯ ಶಿಕ್ಷಕ ಗವಿಸಿದ್ದನಗೌಡ ಗೌಡರ ತಿಳಿಸಿದರು.

ಸಮೀಪದ ಕವಲೂರು ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಿ ಮಂಗಳವಾರ ಮಾತನಾಡಿದರು.

ದೇಶದ ಪ್ರಜಾಪ್ರಭುತ್ವ ವಿಶ್ವದಲ್ಲಿಯೇ ಶ್ರೇಷ್ಠವಾದುದು. ಇದು ಗಟ್ಟಿಯಾಗಿರಬೇಕಾದರೆ ಕಡ್ಡಾಯವಾಗಿ ಮತದಾನ ಅದರ ಬಗ್ಗೆ ಜಾಗೃತಿ ಅವಶ್ಯ. ಯಾವುದೇ ರೀತಿಯ ಆಸೆ ಆಮಿಷಕ್ಕೆ ಒಳಗಾಗದೇ ಸೂಕ್ತ ಅಭ್ಯರ್ಥಿಯನ್ನು ಆರಿಸಿದರೆ ಮಾತ್ರ ಪ್ರಜಾಪ್ರಭುತ್ವಕ್ಕೆ ಸಾರ್ಥಕತೆ ಸಿಗಲಿದೆ ಎಂದರು.

ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ನಡೆಸಲಾಯಿತು. ಮತದಾರರ ಯಾದಿ ಪ್ರಕಟ, ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂತೆಗೆಯುವುದು, ಅಭ್ಯರ್ಥಿಗಳ ಹೆಸರು ಪ್ರಕಟ, ಅಭ್ಯರ್ಥಿಗಳಿಂದ ಮತಯಾಚನೆ, ಮಾದರಿ ಮತಪತ್ರ ಪ್ರಕಟ

ಮತದಾರರಿಂದ ಮತದಾನ, ಮತ ಎಣಿಕೆ, ಬಹುಮತ ಪಡೆದ ಅಭ್ಯರ್ಥಿಗಳ ಆಯ್ಕೆ, ಶಾಲಾ ಸಂಸತ್ ರಚನೆ, ಮಂತ್ರಿಗಳಿಗೆ ಪ್ರಮಾಣ ವಚನ ಬೋಧನೆ ನಡೆಯಿತು.

ಚುನಾವಣಾಧಿಕಾರಿಗಳಾಗಿ ಶಿಕ್ಷಕರಾದ ಗಿರಿಯಪ್ಪ ಹಾರನಳ್ಳಿ, ತೋಟಪ್ಪ ಮಟ್ಟಿ, ನಾಗರಾಜ, ರಾಜಪ್ಪ ಶೆಟ್ಟರ್, ಮಮತಾ ಕೊಡಬಾಳ, ಪ್ರಭು ಶಂಕರ್, ಗಣೇಶ, ಶೇಖರ, ಪ್ರವೀಣ, ಸುಶೀಲಾ ಇತರರು ಇದ್ದರು.

ಸಂಸತ್ ರಚನೆ, ದೇವರಾಜ ಕುರುಣಿ (ಪ್ರಧಾನಿ), ಭೂಮಿಕಾ ಸಂಕಣ್ಣವರ (ಉಪಪ್ರಧಾನಿ), ಸುಶ್ಮಿತಾ ಗೂಗಿ (ವಾರ್ತಾ), ಪ್ರಜ್ವಲ್ (ಸಾಂಸ್ಕೃತಿಕ), ಮಾರುತಿ ಕುರುಣಿ (ಪ್ರವಾಸೋದ್ಯಮ), ಸ್ವಾತಿ ಕಾರಟಗಿ (ಹಣಕಾಸು)

ಪ್ರವೀಣ ಸಿದ್ನೆಕೊಪ್ಪ (ಶಿಕ್ಷಣ),ಹಾಲೇಶ ಕೊಪ್ಪಳ (ಆಹಾರ), ಹನುಮಂತ (ಕ್ರೀಡಾ), ಆಪಾನ್ ದೊಡ್ಡಮನಿ (ನೀರಾವರಿ), ಸೋನೊಕಾ ಬಿಸರಳ್ಳಿ (ಪರಿಸರ), ಸಿಂಚನಾ ತುರ್ಕಾಣಿ (ಆರೋಗ್ಯ) ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.