ಬೀದರ್: ನಾಗರಿಕ ಸೇವೆ ಪರೀಕ್ಷೆಗೆ ಸಜ್ಜಾಗುವ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಾಗಾರ ಆಯೋಜಿಸಿ ಪ್ರೇರಣೆ ತುಂಬಿರುವ ಜಿಲ್ಲಾಡಳಿತ, ಇದೀಗ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿಗಳ ಹುದ್ದೆ ಪಡೆಯಲಿಚ್ಛಿಸುವ ಅಭ್ಯರ್ಥಿಗಳಿಗೆ ಪರೀಕ್ಷೆ ಸಮರ್ಥ ಎದುರಿಸಲು ಡಿ. 5ರಂದು ತರಬೇತಿ ಶಿಬಿರ ಆಯೋಜಿಸಿದೆ.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಹಾಗೂ ಇಲ್ಲಿನ ಗ್ಲೋಬಲ್ ಸೈನಿಕ ಅಕಾಡೆಮಿ ಜತೆಗೂಡಿ ಜಿಲ್ಲಾಡಳಿತ ಅಂದು ಬೆಳಗ್ಗೆ 9.30ರಿಂದ ನಗರದ ರಂಗಮಂದಿರದಲ್ಲಿ ಈ ಕಾರ್ಯಾಗಾರ ನಡೆಸುತ್ತಿದೆ. ಜಿಲ್ಲೆ ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದೆ ಎಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಿವೃತ್ತ ಲೆಫ್ಟಿನಂಟ್ ಜನರಲ್ ರಮೇಶ ಹಳಗಲಿ ಉದ್ಘಾಟಿಸುವರು. ವಾಯುಪಡೆಯ ಏರ್ ಕಮೊಡೋರ್ ಜಿ.ಎಲ್.ಹಿರೇಮಠ, ನೌಕಾಪಡೆ ಕಮೊಡೋರ್ ನವನೀತ್ ಬಾಲಿ, ವಾಯುಪಡೆಯ ಕರ್ನಲ್ ರೋಹಿತ್ ದೇವ್, ಕಾರ್ಗಿಲ್ ಯುದ್ಧದ ಹೀರೋ ನವೀನ್ ನಾಗಪ್ಪ, ಕ್ಯಾಪ್ಟನ್ ಮಾರ್ಟಿನ್ ಜಾಜ್೯ ಇತರರು ಶಿಬಿರದಲ್ಲಿ ಪಾಲ್ಗೊಂಡು ಅಗತ್ಯ ಮಾಹಿತಿ ನೀಡುವ ಜತೆಗೆ ಪ್ರೇರಣೆ ತುಂಬುವರು. ವಿದ್ಯಾರ್ಥಿಗಳು ಇದರ ಲಾಭ ಪಡೆಯುವಂತೆ ಕೋರಿದರು.
ವಿದ್ಯಾರ್ಥಿ ನಿಧಿ: ಜಿಲ್ಲೆಯ ಪ್ರತಿಭಾವಂತ ಹಾಗೂ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಬಡ್ಡಿರಹಿತ ಶೈಕ್ಷಣಿಕ ಸಾಲ ನೀಡಲು ರಚಿಸಿದ ವಿದ್ಯಾರ್ಥಿ ಕಲ್ಯಾಣ ನಿಧಿಯನ್ನು ಜಿಲ್ಲಾಡಳಿತ ಮತ್ತೆ ಆರಂಭಿಸಿದೆ.ಈ ನಿಧಿಗೆ ದಾನಿಗಳು ಉದಾರ ದಾನ ನೀಡುವಂತೆ ಡಿಸಿ ರಾಮಚಂದ್ರನ್ ಮನವಿ ಮಾಡಿದರು.
ಪ್ರತಿಭಾವಂತ ಮತ್ತು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಬ್ಯಾಂಕ್ ಮತ್ತು ವಿದ್ಯಾರ್ಥಿಗಳ ನಡುವೆ ಜಿಲ್ಲಾಡಳಿತ ಸೇತುಬಂಧವಾಗಿ ಕೆಲಸ ಮಾಡಲಿದೆ. ವಿದ್ಯಾರ್ಥಿ, ಬ್ಯಾಂಕ್ ಮತ್ತು ಜಿಲ್ಲಾಡಳಿತದ ತ್ರಿಪಕ್ಷ ಒಡಂಬಡಿಕೆಯೊಂದಿಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ ನೀಡಲಾಗುವುದು. ಪ್ರಸಕ್ತ ನಿಧಿಯು 25 ಲಕ್ಷ ರೂ. ಒಳಗೊಂಡಿದೆ. ಈ ವರ್ಷ 25-50 ವಿದ್ಯಾರ್ಥಿಗಳಿಗೆ ಸಾಲ ನೀಡಲಾಗುವುದು ಎಂದು ಹೇಳಿದರು.
ಎಸ್ಪಿ ನಾಗೇಶ, ಅಪರ ಡಿಸಿ ರುದ್ರೇಶ ಘಾಳಿ, ಎಸಿ ಗರೀಮಾ ಪನ್ವಾರ್, ಭುವನೇಶ ಪಾಟೀಲ್, ಕರ್ನಲ್ ಶರಣಪ್ಪ ಸಿಕೆನಪುರೆ ಇದ್ದರು.
ಭೂಸೇನೆ, ವಾಯುಪಡೆ, ನೌಕಾಪಡೆಗಳಲ್ಲಿ ಅಧಿಕಾರಿಗಳ ಹುದ್ದೆಗೆ ಸರ್ವ ರೀತಿಯಿಂದ ಸನ್ನದ್ಧರಾಗಲು ಕಾರ್ಯಾಗಾರದಲ್ಲಿ ಪರಿಣತರು ಮಾಹಿತಿ ನೀಡುವರು. ಕಾರ್ಯಕ್ರಮ ಯೂಟ್ಯೂಬ್ ಮೂಲಕ ನೇರ ಪ್ರಸಾರ ಮಾಡಿ ಹೆಚ್ಚಿನ ಜನರಿಗೆ ಲಾಭ ಕಲ್ಪಿಸಲು ನಿರ್ಧರಿಸಲಾಗಿದೆ. ಬೀದರ್ ಸೇರಿ ಈ ಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರಲು ಉತ್ತೇಜಿಸಲಾಗುವುದು.| ರಾಮಚಂದ್ರನ್, ಜಿಲ್ಲಾಧಿಕಾರಿ