ಜಿಲ್ಲೆ

ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಿ

ಕಲಬುರಗಿ: ಪ್ರತಿಯೊಬ್ಬರೂ ದೇಶಕ್ಕಾಗಿ ಸಮರ್ಪಣೆ ಮನೋಭಾವದಿಂದ ವ್ಯಕ್ತಿ ಜತೆ ಸುಭದ್ರ ಮತ್ತು ಸಶಕ್ತ ರಾಷ್ಟç ನಿರ್ಮಾಣಕ್ಕೂ ಕೈ ಜೋಡಿಸಬೇಕು ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಭಾಗ್ಯಶ್ರೀ ಬೆಳ್ಳೆ ಹೇಳಿದರು.

ವಿಶ್ವ ಹಿಂದು ಪರಿಷತ್ ಮಹಾನಗರ ಘಟಕದಿಂದ ದುರ್ಗಾಷ್ಟಮಿ ನಿಮಿತ್ತ ನಗರದ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ದುರ್ಗಾ ದೌಡ್ ಶೋಭಾಯಾತ್ರೆಯ ಸಾರ್ವಜನಿಕ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸುಸಂಸ್ಕೃತ ಜನಾಂಗ ಸೃಷ್ಟಿಸಬೇಕಾದರೆ ಯುವಕರಲ್ಲಿ ರಾಷ್ಟ ಪ್ರೇಮ ಬೆಳೆಸುವ ಅಗತ್ಯವಿದೆ. ಮಾತೃಶಕ್ತಿ ಗಟ್ಟಿಯಾಗಬೇಕಾದರೆ ಹಿಂದು ಸಮಾಜ ಜಾಗೃತವಾಗಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ಮಾತನಾಡಿ, ಹೆಣ್ಣು ಶಕ್ತಿ ಸ್ವರೂಪಳಾಗಿದ್ದು, ಸ್ತ್ರೀ ಶಕ್ತಿಯಿಂದ ಯಾವುದೂ ಅಸಾಧ್ಯವಿಲ್ಲ. ಕುಟುಂಬ, ಸಮಾಜ ನಡೆಸುವಲ್ಲಿ ಸ್ತಿ ಪಾತ್ರ ಮಹತ್ವದ್ದು, ತೊಟ್ಟಿಲು ತೂಗುವ ಕೈಗಳು ದೇಶ ಮುನ್ನಡೆಸುವ ಸಾಮರ್ಥ್ಯ ಹೊಂದಿವೆ. ಹೆಣ್ಣು ತನ್ನಲ್ಲಿರುವ ಶಕ್ತಿಯಿಂದ ಇಡೀ ದೇಶವನ್ನು ಆಳಬಲ್ಲಳು ಎಂಬುದನ್ನು ದುರ್ಗಾ ದೌಡ್ ಮೂಲಕ ನೀವೆಲ್ಲರೂ ತೋರಿಸಿದ್ದೀರಿ ಎಂದು ಕೊಂಡಾಡಿದರು.

ಪರಿಷತ್ ವಿಭಾಗೀಯ ಕಾರ್ಯದರ್ಶಿ ಶಿವರಾಜ ಸಂಗೋಳಗಿ, ಜಿಲ್ಲಾಧ್ಯಕ್ಷ ರಾಜು ನವಲದಿ, ಬಸವರಾಜ ಸುಗೂರ, ಪ್ರಶಾಂಶ ಗುಡ್ಡಾ, ಸತೀಶ ಮಾವೂರ, ಸುಮಂಗಲಾ ಚಕ್ರವರ್ತಿ, ಅಶ್ವಿನಿ, ಮಂಜುಳಾ ಗುಪ್ತಾ, ವರ್ಷಾ ಕಳಸಕರ್, ಕವಿತಾ ಪವಾರ್, ಪೂನಂ ಶಾ, ಇಂದಿರಾ, ಶ್ರೀದೇವಿ ಪಾಟೀಲ್, ಸರಸ್ವತಿ ಹೆಬ್ಬಾರ ಇತರರಿದ್ದರು.