ಜಿಲ್ಲೆ

ಸಶಕ್ತ ರಾಷ್ಟ್ರ ಕಟ್ಟಲು ಸೇನೆ ಸೇರಿ

ಬೀದರ್: ಸದೃಢ, ಸಶಕ್ತ ರಾಷ್ಟ್ರ ಕಟ್ಟಲು ಸೇನೆಗೆ ಸೇರಬೇಕು ಹೊರತು ಆಕರ್ಷಕ ಸಂಬಳ, ಸೌಕರ್ಯ ಅಥವಾ ಗೌರವಕ್ಕಾಗಿ ಅಲ್ಲ ಎಂದು ಸೇನಾ ಸಿಬ್ಬಂದಿ ಮಾಜಿ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಮೇಶ ಹಲಗಲಿ ಹೇಳಿದರು.

ಜಿಲ್ಲಾಡಳಿತ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಹಾಗೂ ಗ್ಲೋಬಲ್ ಸೈನಿಕ ಅಕಾಡೆಮಿ ವತಿಯಿಂದ ನಗರದ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಸೇನಾ ಪಡೆಗಳ ಪುನಶ್ಚೇತನ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿ, ಸೇನೆಗೆ ಸೇರುವುದು ಹೆಮ್ಮೆಯ ಸಂಗತಿ. ಪಂಜಾಬ್ನಲ್ಲಿ ಮನೆಗೊಬ್ಬರು ಸೇನೆಯಲ್ಲಿ ಇದ್ದಾರೆ. ಕೆಲವು ಕುಟುಂಬಗಳಲ್ಲಿ ಮೂರನೇ ತಲೆಮಾರಿನ ಸದಸ್ಯರೂ ಸೇನೆಯಲ್ಲಿದ್ದಾರೆ. ದೇಶಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕೆಂಬ ಭಾವ ಪ್ರತಿಯೊಬ್ಬರಲ್ಲಿ ಬರಬೇಕು ಎಂದರು.

ಭಾರತೀಯ ಸೇನೆ ದೇಶದ ಶಕ್ತಿಯಾಗಿದೆ. ಸರ್ವ ಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿದೆ. ಸೇನೆಯಲ್ಲಿ ರಾಜಕೀಯ, ಪ್ರಾದೇಶಿಕತೆ ಹಾಗೂ ಕೋಮುವಾದಕ್ಕೆ ಅವಕಾಶ ಇಲ್ಲ. ಸೇನೆಗೆ ಸೇರಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರಬೇಕು. ದೇಶಕ್ಕಾಗಿ ಸೇವೆ ಸಲ್ಲಿಸುವ ದೊಡ್ಡ ಅವಕಾಶ ಸೇನೆ ನೀಡುತ್ತದೆ ಎಂದು ಹೇಳಿದರು.

ನಿವೃತ್ತ ಕರ್ನಲ್ ಶರಣಪ್ಪ ಸಿಕೇನಪುರ ಮಾತನಾಡಿ, ಸೇನೆಯಲ್ಲಿರುವ ವಿಪುಲ ಅವಕಾಶ ಜಿಲ್ಲೆಯ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು. ಪ್ರತಿ ವರ್ಷ 200 ವಿದ್ಯಾರ್ಥಿಗಳಾದರೂ ಸೇನೆಯ ವಿವಿಧ ಹುದ್ದೆಗಳಿಗೆ ಸೇರಬೇಕು. ಈ ದಿಸೆಯಲ್ಲಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಗ್ಲೋಬಲ್ ಸೈನಿಕ ಅಕಾಡೆಮಿಯಲ್ಲಿ ಜನವರಿ 1ರಿಂದ ತರಬೇತಿ ಆರಂಭಿಸಲಾಗುತ್ತಿದೆ. ಸೇನಾ ಭರ್ತಿ ಮಾರ್ಗದರ್ಶನ ನೀಡಲು ಸಹಾಯವಾಣಿಯನ್ನೂ ಶುರು ಮಾಡಲಾಗುತ್ತಿದೆ ಎಂದು ಹೇಳಿದರು.

ಕ್ಯಾಪ್ಟನ್ ಮಾರ್ಟಿನಾ ಜಾಜ್೯ ಅವರು ಸೇನೆಯ ಯಾವ ಹುದ್ದೆಗೆ ಸೇರಲು ಏನೇನು ಅರ್ಹತೆ ಬೇಕು ಎನ್ನುವ ಮಾಹಿತಿ ನೀಡಿದರು. ಜಿಲ್ಲಾಧಿಕಾರಿ ರಾಮಚಂದ್ರನ್ ಮಾತನಾಡಿದರು. ಭಾರತೀಯ ವಾಯುಪಡೆಯ ಏರ್ ಕಮಾಡೋರ್ ಜಿ.ಎಲ್. ಹಿರೇಮಠ, ನೌಕಾಪಡೆ ಕಮಾಡೋರ್ ನವನೀತ್ ಬಾಲಿ, ಕರ್ನಲ್ ರೋಹಿತ್ ದೇವ್, ಕ್ಯಾಪ್ಟನ್ ನವೀನ್ ನಾಗಪ್ಪ ಉಪನ್ಯಾಸ ನೀಡಿದರು. ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚ್ಯೂರಿ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಿಚಡ್೯ ವಿಲ್ಸನ್ ಡಿಸೋಜಾ, ಎಸ್ಪಿ ನಾಗೇಶ, ಎಸಿ ಭುವನೇಶ ಪಾಟೀಲ್, ಗರೀಮಾ ಪನ್ವಾರ್, ರೋಟರಿ ಮಾಜಿ ಗವರ್ನರ್ ಕೆ.ಸಿ.ಸೇನನ್, ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಜಗದೀಶ ಪಾಟೀಲ್, ಪ್ರಮುಖರಾದ ನಿತಿನ್ ಕರ್ಪೂರ್, ಡಾ. ಕಪಿಲ್ ಪಾಟೀಲ್, ಡಾ. ರಿತೇಶ ಸುಲೇಗಾಂವ, ಸತೀಶ ಸ್ವಾಮಿ, ಡಾ.ರಘು ಕೃಷ್ಣಮೂರ್ತಿ, ನಿತೇಶ ಬಿರಾದಾರ, ಡಾ. ಆರತಿ ರಘು, ರಿಷಿಕೇಶ ಪಾಟೀಲ್, ಡಾ. ಶರಣ ಬುಳ್ಳಾ, ಜಯೇಶ ಪಟೇಲ್, ಶಿವಕುಮಾರ ಪಾಖಲ್, ಚೇತನ್ ಮೇಗೂರ್, ಡಾ. ಶಿಲ್ಪಾ ಬುಳ್ಳಾ, ಡಾ. ಉಜೇರ್, ರಾಜಕುಮಾರ ಅಳ್ಳೆ ಇದ್ದರು. ಈ ವೇಳೆ ರೋಟರಿ ಕ್ಲಬ್ ನ್ಯೂ ಸೆಂಚ್ಯೂರಿ ವೆಬ್ ಸೈಟ್ ಗೆ ಚಾಲನೆ ನೀಡಲಾಯಿತು.
ಮುಂಚಿತವಾಗಿ ನೋಂದಣಿ ಮಾಡಿಕೊಂಡಿದ್ದ 350 ವಿದ್ಯಾರ್ಥಿಗಳು ಪಾಲ್ಗೊಂಡು ಶಿಬಿರದಿಂದ ಪ್ರೇರಣೆ ಪಡೆದರು. ಹೆಚ್ಚಿನವರಿಗೆ ಈ ಕಾರ್ಯಕ್ರಮದ ಲಾಭ ಕಲ್ಪಿಸುವ ನಿಟ್ಟಿನಲ್ಲಿ ಆನ್ ಲೈನ್ ನಲ್ಲಿ ನೇರ ಪ್ರಸಾರದ ವ್ಯವಸ್ಥೆ ಸಹ ಮಾಡಲಾಗಿತ್ತು.

ವಿದ್ಯಾರ್ಥಿಗಳು ಏನಾಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಿದರೆ ಜೀವನದಲ್ಲಿ ಯಶಸ್ಸು ಗಳಿಸಬಹುದು. ಸೇನೆ ಸೇರಿದಂತೆ ತಮಗೆ ಆಸಕ್ತಿ ಇರುವ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡಲ್ಲಿ ಉತ್ತುಂಗಕ್ಕೆ ಏರಬಹುದು. ಸಾಧಿಸುವ ಛಲವಿದ್ದರೆ ಯಾವುದೇ ಅಡ್ಡಿಗಳು ಬರುವುದಿಲ್ಲ.| ರಾಮಚಂದ್ರನ್, ಡಿಸಿ