ಕೊಳ್ಳೇಗಾಲ: ಸವಿತಾ ಮಹರ್ಷಿಗಳ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ನಿವೃತ್ತ ಮುಖ್ಯಶಿಕ್ಷಕ ಹಿಂದ್ವಾಡಿ ಶಿವಣ್ಣ ಹೇಳಿದರು.
ಪಟ್ಟಣದ ಸವಿತಾ ಸಮಾಜದ ಸಮುದಾಯ ಭವನದಲ್ಲಿ ಸವಿತಾ ಸಮಾಜ ಸ್ನೇಹ ಬಳಗದಿಂದ ಮಂಗಳವಾರ ಆಯೋಜಿಸಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸವಿತಾ ಸಮಾಜದ ಕೊಡುಗೆ ಈ ನಾಡಿಗೆ ಅಪಾರವಾಗಿದೆ. ಈ ಸಮಾಜದ ಜನರು ಸಂಗೀತ ಕಲೆಯಲ್ಲೂ ಪರಿಣಿತಿ ಪಡೆದಿದ್ದಾರೆ. ಸರಳ ಮತ್ತು ಸಜ್ಜನಿಕೆಗೆ ಪ್ರತೀಕವಾದ ಸಮಾಜ ಇದಾಗಿದೆ. ಇಂತಹ ಸಣ್ಣ ಸಮಾಜ ಮುಖ್ಯವಾಹಿನಿಗೆ ಬರಬೇಕು. ದುರಭ್ಯಾಸದಿಂದ ದೂರ ಉಳಿದು ಆರ್ಥಿಕವಾಗಿ ಮುಂದುವರಿದರೆ ಉತ್ತಮ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಸಮುದಾಯ ಸಂಘಟಿತವಾಗುವ ಜತೆಗೆ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿಕೊಡಬೇಕು. ಪ್ರಸ್ತುತ ಸಮಾಜದಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಹೆಚ್ಚಾಗಿದೆ. ಆದ್ದರಿಂದ ಮಕ್ಕಳಿಗೆ ಶಿಕ್ಷಣ ಬಹಳ ಮುಖ್ಯವಾಗಿದೆ ಎಂದರು.
ಬಳಿಕ ಸಮಾಜದ ಮುಖಂಡ ಮಹೇಶ್ ಮಾತನಾಡಿ, ಸವಿತಾ ಸಮಾಜದ ಮಕ್ಕಳು ಶಿಕ್ಷಿತರಾಗಿ ಎಂದು ರಾಜಕಾರಣಿಗಳು ಹೇಳುವುದು ಸಾಮಾನ್ಯ ಆದರೆ, ಸಮುದಾಯದ ಮಕ್ಕಳಿಗೆ ವಿದ್ಯಾರ್ಥಿ ನಿಲಯಗಳಲ್ಲಿ ಅವಕಾಶ ಸಿಗುತ್ತಿಲ್ಲ. ನಮ್ಮ ಸಮಾಜ ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಬಹಳ ಹಿಂದುಳಿದಿದೆ. ಸರ್ಕಾರ ಈ ನಿಟ್ಟಿನಲ್ಲಿ ನಮ್ಮ ಸಮಾಜದ ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಅವಕಾಶ ಕಲ್ಪಿಸಬೇಕು. ಹಳ್ಳಿಯಿಂದ ಬಂದ ಹೆಣ್ಣು ಮಕ್ಕಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿಕೊಡಬೇಕು ಎಂದರು.
ಸವಿತ ಸಮಾಜ ಸ್ನೇಹ ಬಳಗದ ಪದಾಧಿಕಾರಿಗಳಾದ ರಮೇಶ್, ಚಂದ್ರು, ಟೈಲರ್ ಮಹೇಶ್, ರಾಜಶೆಟ್ಟಿ (ತಮ್ಮಯ್ಯ), ಚಂದ್ರು, ನಾರಾಯಣ ಶೆಟ್ರು, ಸುರೇಶ್, ನಾಗರಾಜು, ಮಹೇಂದ್ರ, ಮಧು, ರಮೇಶ್, ರಂಗಸ್ವಾಮಿ, ಮಂಜು, ಕಿರಣ್, ಬಲರಾಮು, ನಾಗೇಂದ್ರ, ಪ್ರವೀಣ್ ಮತ್ತಿತರರಿದ್ದರು.