ಬೆಳಗಾವಿ: ವಿಜ್ಞಾನ ಹಾಗೂ ತಾಂತ್ರಿಕ ಕ್ಷೇತ್ರಗಳನ್ನೊಳಗೊಂಡಂತೆ ಎಲ್ಲ ಕ್ಷೇತ್ರಗಳಲ್ಲಿ ಇತ್ತಿಚಿನ ವರ್ಷಗಳಲ್ಲಿ ನಮ್ಮ ರಾಷ್ಟ್ರ ಮಹತ್ತರ ಬೆಳವಣಿಗೆ ಹೊಂದಿದೆ ಎಂದು ಪದ್ಮಶ್ರೀ ಪುರಸ್ಕೃತ ವಿಜ್ಞಾನಿ ಬಿ.ಎನ್. ಸುರೇಶ ಹೇಳಿದರು.
ಅವರು, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಸರ್. ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಅಭಿಯಂತರರ ದಿನ, ಮತ್ತು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ರಾಷ್ಟ್ರದಲ್ಲಿ ಪ್ರತಿಭೆಗೆ ಯಾವುದೇ ಕೊರತೆ ಇಲ್ಲ. ನಮ್ಮ ಪಾರಂಪರಿಕ ಹೋರಾಟದ ಮನೋಭಾವ, ದೃಡ ನಿಶ್ಚಯದೊಂದಿಗೆ ಭಾರತಿಯರಾದ ನಾವುಗಳು ಯಾವುದೇ ಗಂಭೀರ ಸಮಸ್ಯೆಗಳನ್ನು ಅಥವಾ ಸವಾಲುಗಳನ್ನು ಎದುರಿಸಬಲ್ಲೆವು ಎಂದು ಕೋವಿಡ್ ವಿರುದ್ಧದ ಹೋರಾಟದಲ್ಲಿ ನಾವು ಜಗತ್ತಿಗೆ ತೋರಿಸಿಕೊಟ್ಟಿದ್ದೇವೆ.
ಇದಕ್ಕಿಂತ ಮುಖ್ಯವೆಂದರೆ ನಾವು ಹೆಚ್ಚಿನ ಸಂಖ್ಯೆಯ ರಾಷ್ಟ್ರಗಳಿಗೆ ಕೋವಿಡ್ ವ್ಯಾಕ್ಸಿನ್ ತಯಾರಿಕೆ ಸೇರಿದಂತೆ ಹಲವು ವ್ಯದ್ಯಕೀಯ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಸಹಾಯ ಹಸ್ತವನ್ನು ಸಹ ಚಾಚಿದ್ದೇವೆ. ಇದು ಖಂಡಿತವಾಗಿಯೂ ನಮ್ಮಲ್ಲಿರುವ ಮತ್ತು ತಾಂತ್ರಿಕ ಶಕ್ತಿ, ಪ್ರತಿಭೆ ಮತ್ತು ನಿರ್ವಹಣಾ ಸಾಮರ್ಥ್ಯದ ಕೌಶಲ್ಯದ ಶಕ್ತಿಯನ್ನು ಪ್ರತಿನಿಧಿಸುತ್ತದೆ ಎಂದರೆ ಅತಿಶಯೋಕ್ತಿಯಾಗಲಾರದು ಎಂದರು. ಇಂದಿನ ಯುವಜನತೆ ಹಾಗೂ ವಿದ್ಯಾರ್ಥಿಗಳು ಪ್ರಸ್ತುತ ಭಾರತದ ಸುವರ್ಣಯುಗಕ್ಕೆ ಸಾಕ್ಷಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಭಾರತದಲ್ಲಿ ಕಾಣುತ್ತಿರುವ ಪ್ರಗತಿ ಹಾಗೂ ಜಾಗತಿಕವಾಗಿ ಅವುಗಳು ಬೀರುತ್ತಿರುವ ಪರಿಣಾಮ ಜೊತೆಗೆ ಇನ್ನೂ ಹೆಚ್ಚಿನ ರೀತಿಯ ಸಾಧನೆಗೆ ಪ್ರತಿ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳು ಕಾಣುತ್ತಿವೆ.
ಇಂದಿನ ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು 2047ರ ಅವಧಿಗೆ ಅಂದರೆ ಸ್ವಾತಂತ್ರ್ಯದ ಶತಮಾನೋತ್ಸವ ಸಂದರ್ಭದಲ್ಲಿ ನಮ್ಮ ರಾಷ್ಟ್ರವೂ ಪ್ರತಿಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿದ ಸ್ವಾವಲಂಬಿ ರಾಷ್ಟ್ರವಾಗಿ ನಿರ್ಮಾಣ ಮಾಡಲು ಪಣ ತೊಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು. ಮಂಗಳಯಾನದ ಯಶಸ್ಸಿನ ನಂತರ ಚಂದಿರನ ದಕ್ಷಿಣ ತುದಿಯನ್ನು ನಾವು ತಲುಪಿದ್ದೇವೆ. ಈ ಸಾಧನೆ ನಿಮ್ಮೆಲ್ಲರನ್ನು ಮತ್ತಷ್ಟು ಪ್ರೇರೇಪಿಸುವುದಷ್ಟೇ ಅಲ್ಲದೆ ರಾಷ್ಟ್ರದ ಯುವ ಶಕ್ತಿಯನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿಕೊಳ್ಳಲ್ಲು ಸಹ ಪ್ರೇರೇಪಿಸಿದೆ ಸುರೇಶ ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿತಾವಿಯ ಕುಲಪತಿ ಪ್ರೊ.ವಿದ್ಯಾಶಂಕರ ಎಸ್.ಅವರು ಮಾತನಾಡಿ, ಸರ್ ಎಂ.ವಿ ಎಂದೇ ಖ್ಯಾತರಾಗಿರುವ ಸರ್ ಎಂ ವಿಶ್ವೇಶ್ವರಯ್ಯನವರ ಬದುಕಿದ ಆದರ್ಶದ ಬದುಕು ನಮ್ಮೆಲ್ಲರಿಗೆ ಸ್ಫೂರ್ತಿ ಮತ್ತು ದಾರಿ ದೀಪವಾಗಿದೆ. ಪ್ರತಿ ಇಂಜಿನಿಯರ್ ಹಾಗೂ ಆಡಳಿತಗಾರ ಅವರ ಪ್ರ್ರಾಮಾಣಿಕತೆ ಹಾಗೂ ಚಿಂತನಾಶಕ್ತಿಯನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು. ಕುಲಸಚಿವ ಪ್ರೊ. ಬಿ. ಈ ರಂಗಸ್ವಾಮಿ ಸ್ವಾಗತಿಸಿದರು. ಹಣಕಾಸು ಅಧಿಕಾರಿ ಎಂ ಎ ಸಪ್ನಾ ಹಾಜರಿದ್ದರು. ಹಾಗೂ ಕಂಪ್ಯೂಟರ್ ಸೈನ್ಸ್ ವಿಭಾಗದ ಚೇರ್ಮನ್ ಪ್ರೊ.ಎಸ್.ಎಲ್ ದೇಶಪಾಂಡೆ ವಂದಿಸಿದರು. ಪ್ರೋ.ರೋಹನ್ ಗುರವ ಕಾರ್ಯಕ್ರಮ ನಿರೂಪಿಸಿದರು.