ಜಿಲ್ಲೆ

ಸವಾರರಿಬ್ಬರು ಸಾವು, ಮಹಿಳೆಗೆ ಗಾಯ

ಲೋಕೇಶ್ ಮನು. ಡಿ

ಎಚ್.ಡಿ.ಕೋಟೆ: ತಾಲೂಕಿನ ಜಕ್ಕಹಳ್ಳಿ ದೇವಲಪುರ ಗ್ರಾಮದ ಬಳಿ ಗುರುವಾರ ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ಸಂಭವಿಸಿ, ಇಬ್ಬರು ಸವಾರರು ಮೃತಪಟ್ಟು, ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.


ಸರಗೂರು ತಾಲೂಕಿನ ನೆಮ್ಮನಹಳ್ಳಿ ಗ್ರಾಮದ ಲೆ.ನಂಜೇಗೌಡರ ಮಗ ದೇವೇಶ(46), ಬಂಕವಾಡಿ ಕಾಲನಿ ನಿವಾಸಿ ಪ್ರಕಾಶ್(35) ಮೃತಪಟ್ಟ ಸವಾರರು. ಹಿಂಬದಿಯಲ್ಲಿ ಕುಳಿತ್ತಿದ್ದ ಪ್ರಕಾಶ್ ಪತ್ನಿ ಶ್ರುತಿ ಗಂಭೀರವಾಗಿ ಗಾಯಗೊಂಡಿದ್ದು, ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಘಟನೆ: ಪ್ರಕಾಶ್ ತನ್ನ ಪತ್ನಿ ಶ್ರುತಿ ಜತೆ ತಮ್ಮ ಟಿವಿಎಸ್ ಎಕ್ಸೆಲ್ ಮೊಪೆಡ್‌ನಲ್ಲಿ ಗುರುವಾರ ಬೆಳಗ್ಗೆ ಕಾರ್ಯ ನಿಮಿತ್ತ ಹ್ಯಾಂಡ್ ಪೋಸ್ಟ್ ಗೆ ಬಂದು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದರು. ಈ ವೇಳೆ ದೇವಲಪುರ ಗ್ರಾಮದ ಬಳಿ ನೆಮ್ಮನಹಳ್ಳಿ ಗ್ರಾಮದ ದೇವೇಶ್ ತಮ್ಮ ಹೀರೋ ಹೋಂಡಾ ಸ್ಪ್ಲೆಂಡರ್ ಬೈಕ್‌ನಲ್ಲಿ ಕೊಲ್ಲೇಗೌಡನಹಳ್ಳಿ ಗ್ರಾಮದ ಪತ್ನಿ ಮನೆಗೆ ಬರುತ್ತಿದ್ದಾಗ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಸಾವರರು ಕೆಳಕ್ಕೆ ಬಿದ್ದಿದ್ದಾರೆ. ಪರಿಣಾಮ ಮೂವರ ತಲೆಗೂ ತೀವ್ರವಾದ ಪೆಟ್ಟು ಬಿದ್ದಿದೆ. ಇದರಿಂದ ಸ್ಥಳದಲ್ಲೇ ಪ್ರಕಾಶ್ ಮೃತಪಟ್ಟರು. ಉಳಿದ ಇಬ್ಬರು ಗಾಯಾಳುಗಳನ್ನು ತುರ್ತು ವಾಹನದ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಮಾರ್ಗಮಧ್ಯೆ ದೇವೇಶ ಕೊನೆಯುಸಿರೆದಿದ್ದಾರೆ. ಶ್ರುತಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ.


ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.