ಬೆಳಗಾವಿ: ಕೃಷಿಗೆ ಯೋಗ್ಯವಲ್ಲದ, ರೈತರಿಗೆ ನಷ್ಟ ಉಂಟು ಮಾಡುತ್ತಿರುವ ಸವಳು-ಜವಳು ಭೂಮಿಯಲ್ಲಿ ಮೀನು ಸಾಕಣೆ ಮಾಡಲು ಮೀನುಗಾರಿಕೆ ಇಲಾಖೆ ಮುಂದಾಗಿದೆ. ಅಲ್ಲದೆ, ವಾರ್ಷಿಕ 20 ಸಾವಿರ ಟನ್ ಮೀನು ಉತ್ಪಾದನೆ ಗುರಿ ಹೊಂದಿದೆ.
ಈಗಾಗಲೇ ಕೇಂದ್ರ ಸರ್ಕಾರದ ಪಿಎಂಎಂಎಸ್‌ವೈ ಯೋಜನೆಯಡಿ ಕೆಲ ರೈತ ಮಹಿಳೆಯರೂ ಸವಳು-ಜವಳು ಜಮೀನಿನಲ್ಲಿ ಮೀನು ಸಾಕಣೆ ಮಾಡುವ ಮೂಲಕ ಆರ್ಥಿಕವಾಗಿ ಸದೃಢವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿನ ಸವಳು-ಜವಳು ಭೂಮಿಯಲ್ಲಿ ಮೀನು ಸಾಕಣೆ ವಿಶೇಷ ಯೋಜನೆ ಅನುಷ್ಠಾನಗೊಳಿಸಲು ಇಲಾಖೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ಮಾಡಿದೆ.
ಭೂಮಿ ಸದುಪಯೋಗಕ್ಕೆ ಕ್ರಮ: ಬೆಳಗಾವಿ ಜಿಲ್ಲೆಯಲ್ಲಿ ಕರ್ನಾಟಕ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮ (ಕಾಡಾ), ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಪಾತ್ರದಲ್ಲಿರುವ ಜಮೀನು ಸೇರಿದಂತೆ ಸುಮಾರು 64 ಸಾವಿರ ಹೆಕ್ಟೇರ್‌ನಷ್ಟು ಭೂಮಿಯ ಮಣ್ಣು ಸತ್ವ ಕಳೆದುಕೊಂಡು ಸವಳು-ಜವಳಾಗಿ ಮಾರ್ಪಟ್ಟಿದೆ. ಅತಿಯಾದ ಮಳೆ, ಹೊಲದಲ್ಲಿ ನೀರು ಸಂಗ್ರಹ ಹಾಗೂ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಸೇರಿದಂತೆ ನಾನಾ ಕಾರಣಗಳಿಂದ ಈ ಪ್ರದೇಶದಲ್ಲಿ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇಂತಹ ಕೃಷಿ ಭೂಮಿಯಲ್ಲಿ ಮೀನು
ಸಾಕಣೆ ಮಾಡಿ, ಆ ಭೂಮಿಯನ್ನೂ ಸದುಪಯೋಗ ಮಾಡಿಕೊಳ್ಳಲು ಮೀನುಗಾರಿಕಾ ಇಲಾಖೆ ನಿರ್ಧರಿಸಿದೆ.
110ಕ್ಕೂ ಅಧಿಕ ಅರ್ಜಿ: ಸದ್ಯ ಜಿಲ್ಲೆಯಲ್ಲಿ ಕೃಷಿ ಹೊಂಡ, ಕೆರೆಗಳಲ್ಲಿ ಮೀನು ಸಾಕಣೆ ಮೂಲಕ ವಾರ್ಷಿಕ 10 ಸಾವಿರ ಟನ್‌ವರೆಗೆ ಮೀನು ಉತ್ಪಾದನೆ ಮಾಡಲಾಗುತ್ತಿದೆ. ಮೂಡಲಗಿ, ಗೋಕಾಕ, ಅಥಣಿ ಸೇರಿದಂತೆ ವಿವಿಧ ಕಡೆಗಳಲ್ಲಿ ರೈತರು ತಮ್ಮ ಸವಳು-ಜವಳು ಭೂಮಿಯಲ್ಲಿ ಮೀನು ಸಾಕಣೆ ಮಾಡಲು ಅರ್ಜಿ ಸಲ್ಲಿಸುತ್ತಿದ್ದಾರೆ. 2021-22ನೇ ಸಾಲಿನಲ್ಲಿ ಮೀನು ಸಾಕಣೆಗಾಗಿ 110ಕ್ಕೂ ಅಧಿಕ ಅರ್ಜಿ ಮೀನುಗಾರಿಕೆ ಇಲಾಖೆಗೆ ಸಲ್ಲಿಕೆಯಾಗಿವೆ.
ಅನುದಾನ ಸೌಲಭ್ಯಕ್ಕೆ ನಿರ್ಧಾರ: ಸವಳು-ಜವಳು ಭೂಮಿ ಹೊಂದಿರುವ ರೈತರು ಮೀನು ಸಾಕಣೆ ಉದ್ಯೋಗದ ಮೂಲಕ ವಾರ್ಷಿಕ ಲಕ್ಷಾಂತರ ರೂ. ಆದಾಯ ಗಳಿಸಬಹುದು.
ಆದರೆ, ರೈತರಿಗೆ ಈ ಕುರಿತು ತಿಳಿವಳಿಕೆ, ಮಾರುಕಟ್ಟೆ ಸಮಸ್ಯೆ ಇನ್ನಿತರ ಕಾರಣಗಳಿಂದಾಗಿ ಮೀನು ಸಾಕಣೆ ಮಾಡುತ್ತಿಲ್ಲ. ಅಲ್ಲದೆ, ತಮ್ಮ ಜಮೀನಿನಲ್ಲಿ ಮೀನು ಸಾಕಣೆ ಮಾಡಲು ಮತ್ತೊಬ್ಬರಿಗೆ ಗುತ್ತಿಗೆಯನ್ನೂ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮೀನುಗಾರಿಕಾ ಇಲಾಖೆಯು ಸವಳು-ಜವಳು ಭೂಮಿಯಲ್ಲಿ ಮೀನು ಸಾಕಣೆ ಮಾಡಲು ಪ್ರತ್ಯೇಕ ಅನುದಾನ, ಸಹಾಯಧನ ಸೌಲಭ್ಯ ಕಲ್ಪಿಸುವ ವಿಶೇಷ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸವಳು-ಜವಳು ಭೂಮಿಯಲ್ಲಿ ಮೀನು ಸಾಕಣೆ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಆದರೆ, ರೈತರು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ಅಲ್ಲದೆ, ತಮ್ಮ ಸವಳು-ಜವಳು ಜಮೀನನ್ನು ಬೇರೆಯವರಿಗೆ ಗುತ್ತಿಗೆಗೂ ನೀಡುತ್ತಿಲ್ಲ. ನದಿ ಪ್ರದೇಶದ ಜನರು ಪ್ರವಾಹ ಬರುವ ಸಾಧ್ಯತೆ ಇರುವುದರಿಂದ ಮೀನು ಸಾಕಣೆ ಮಾಡಲು ಒಲವು ತೋರುತ್ತಿಲ್ಲ. ಸವಳು-ಜವಳು ಭೂಮಿಯಲ್ಲಿಯೇ ಮೀನು ಸಾಕಣೆ ಮಾಡಬೇಕು ಎಂಬ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಅಲ್ಲದೆ, ಈ ವಿಷಯ ಕುರಿತು ಕರ್ನಾಟಕ ಅಚ್ಚುಕಟ್ಟು ಪ್ರದೇಶಭಿವೃದ್ಧಿ ನಿಗಮದ ಗಮನಕ್ಕೂ ತರಲಾಗಿದೆ.| ಎಸ್.ಕುಲಕರ್ಣಿ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ, ಬೆಳಗಾವಿ
| ಮಂಜುನಾಥ ಕೋಳಿಗುಡ್ಡ ಬೆಳಗಾವಿ