ಜಿಲ್ಲೆ

ಸವಲತ್ತುಗಳು ಸಮರ್ಪಕವಾಗಿ ತಲುಪುತ್ತಿಲ್ಲ

ಶನಿವಾರಸಂತೆ: ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಸಮರ್ಪಕವಾಗಿ ತಲುಪಿಸುವ ಕಾರ್ಯವಾಗುತ್ತಿಲ್ಲ ಎಂದು ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಎನ್.ರಘು ವಿಷಾದಿಸಿದರು.


ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಕಾರ್ಮಿಕ ಮತ್ತು ಕೂಲಿ ಕಾರ್ಮಿಕರ ಸಂಘದಿಂದ ಶನಿವಾರಸಂತೆಯ ಕಾರ್ಮಿಕರ ಸಂಘದ ಸಭಾಂಗಣದಲ್ಲಿ ಕಾರ್ಮಿಕರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಹಮ್ಮಿಕೊಂಡಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಇವರಿಗೆ ನಕಲಿ ದಾಖಲಾತಿ ದೊರೆಯುತ್ತಿದೆ. ಇದರಿಂದ ಸ್ಥಳೀಯ ಕಾರ್ಮಿಕ ಫಲಾನುಭವಿಗಳಿಗೆ ಸವಲತ್ತುಗಳು ಸಿಗುತ್ತಿಲ್ಲ. ಆದರೆ, ಈಗಿನ ಸರ್ಕಾರ ನಕಲಿ ಕಾರ್ಡ್‌ದಾರರನ್ನು ಪತ್ತೆ ಮಾಡಲು ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದೆ. ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಕಲಿ ಕಾರ್ಮಿಕರ ಕಾರ್ಡ್, ದಾಖಲಾತಿಗಳನ್ನು ತಡೆಹಿಡಿಯಬೇಕಿದೆ ಎಂದರು.


ಕಾರ್ಮಿಕ ಫಲಾನುಭವಿಗಳಿಗೆ ಸೂಕ್ತ ವೇಳೆಯಲ್ಲಿ ಕಾರ್ಡ್ ನೋಂದಣಿ ಮತ್ತು ನವೀಕರಣ ಮಾಡುವುದರಿಂದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಿಗುವ ಶಿಷ್ಯ ವೇತನ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ಕಾರ್ಮಿಕರು ಒಗ್ಗಟ್ಟಾದರೆ ಸಂಘಟನೆ ಬೆಳೆೆಯುತ್ತದೆ ಎಂದರು.


ಕಾರ್ಯಾಗಾರದಲ್ಲಿ ಶನಿವಾರಸಂತೆ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಠಲ್, ಗ್ರಾಪಂ ಅಧ್ಯಕ್ಷೆ ಫರ್ಜಾನ್ ಶಾಹಿದ್ ಖಾನ್, ಗ್ರಾಪಂ ಸದಸ್ಯೆ ಸರೋಜ ಶೇಖರ್ ಇತರರು ಇದ್ದರು.