ಜಿಲ್ಲೆ

ಸವಲತ್ತು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಿ

ಚಿತ್ರದುರ್ಗ: ಸರ್ಕಾರ ಶಿಕ್ಷಣಕ್ಕಾಗಿ ಕೊಡುತ್ತಿರುವ ಸವಲತ್ತುಗಳನ್ನು ಬಳಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಗೌರವಾಧ್ಯಕ್ಷ ಬಿ.ಕೆ. ರಹಮತ್‌ವುಲ್ಲಾ ಕೊಳಗೇರಿ ಪ್ರದೇಶದ ನಿವಾಸಿಗಳಿಗೆ ಸಲಹೆ ನೀಡಿದರು.

ಸಂಘಟನೆ ಜಿಲ್ಲಾ ಸಮಿತಿ ಮಂಗಳವಾರ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಕೊಳಗೇರಿ ನಿವಾಸಿಗಳ ಸಮಾವೇಶ ಹಾಗೂ ಬಡವರಿಗೆ ಹೊದಿಕೆ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡತನದ ಕಾರಣಕ್ಕೆ ಚಿಕ್ಕ ಮಕ್ಕಳನ್ನು ದುಡಿಮೆಗೆ ಕಳಿಸದೆ ಶಾಲೆಗೆ ಕಳಿಸಬೇಕು. ಅಪ್ರಾಪ್ತ ಹೆಣ್ಣು ಮಕ್ಕಳ ವಿವಾಹ ಮಾಡಿದರೆ ಶಿಕ್ಷೆ ಖಚಿತ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್. ಮಂಜಪ್ಪ ಮಾತನಾಡಿ, ಬಡವರು ಹಾಗೂ ಕೊಳಗೇರಿ ನಿವಾಸಿಗಳ ಪರವಾಗಿ ಹಿಂದಿನಿಂದಲೂ ಹೋರಾಟ ಮಾಡಿಕೊಂಡು ಬರುತ್ತಿರುವ ಗಣೇಶ್ ಅವರಿಗೆ ನೆಲೆಯಿಲ್ಲದಂತಾಗಿರುವುದು ನೋವಿನ ಸಂಗತಿ. ಹಾಗಾಗಿ ಕೊಳಗೇರಿ ನಿವಾಸಿಗಳು ಗಣೇಶ್‌ಗೆ ಬೆಂಬಲವಾಗಿ ನಿಲ್ಲಬೇಕು ಎಂದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ ಮಾತನಾಡಿದರು. ಉದ್ಯಮಿಗಳಾದ ಸೈಟ್‌ಬಾಬಣ್ಣ, ಅಲೆಕ್ಸಾಂಡರ್, ಜಿಲ್ಲಾ ಬಡಗಿ ಕೆಲಸಗಾರರ ಸಂಘದ ಅಧ್ಯಕ್ಷ ಎ. ಜಾಕೀರ್‌ಹುಸೇನ್, ಎಚ್.ಎಸ್.ಖಾನ್, ಕೆಕೆಎನ್‌ಎಸ್‌ಎಸ್ ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್, ಕರುನಾಡ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಇಸ್ಮಾಯಿಲ್, ಜಾನಪದ ಜಾಗೃತಿ ಪರಿಷತ್ ಅಧ್ಯಕ್ಷ ಎಚ್. ಪ್ಯಾರೆಜಾನ್ ಇದ್ದರು.