ಹನೂರು: ಮನುಷ್ಯ ಮನುಷ್ಯನನ್ನು ಗೌರವಿಸುವುದು ಹಾಗೂ ಗೌರವಯುತವಾಗಿ ಬದುಕುವುದನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೊಳ್ಳೇಗಾಲ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ಆರ್.ಲೋಕಪ್ಪ ತಿಳಿಸಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಅಡಳಿತ, ಕೊಳ್ಳೇಗಾಲ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಅಭಿಯೋಜನಾ ಇಲಾಖೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ಮುಖ್ಯವಾಗಿ ಅಗತ್ಯವಿರುವುದು ಆಹಾರ, ವಸತಿ ಹಾಗೂ ಬಟ್ಟೆ ಇವುಗಳಿಲ್ಲದೆ ಜೀವನವನ್ನು ಊಹಿಸಲು ಅಸಾಧ್ಯ. ಈ ಸವಲತ್ತುಗಳನ್ನು ಪಡೆಯುವುದು ಪ್ರತಿಯೊಬ್ಬ ಪ್ರಜೆಯ ಜನ್ಮಸಿದ್ಧ ಹಕ್ಕಾಗಿದೆ. ಈ ದಿಸೆಯಲ್ಲಿ ನಾಗರಿಕ ಸಮಾಜದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಘೋಷಿಸಲಾದ ಮಾನವ ಹಕ್ಕುಗಳನ್ನು ವಿಶ್ವಸಂಸ್ಥೆಯು 1948ರಲ್ಲಿ ಅಂಗೀಕರಿಸಿತು. ಸಮಾಜದಲ್ಲಿ ನಾಗರಿಕನಾಗಿ ಬದುಕಲು ಮಾನವ ಹಕ್ಕುಗಳು ಅನಿವಾರ್ಯ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಡಿ.ಎಸ್. ಬಸವರಾಜು, ಕಾರ್ಯದರ್ಶಿ ಎಂ. ಮೋಹನ್‌ಕುಮಾರ್, ಗ್ರೇಡ್-2 ತಹಸೀಲ್ದಾರ್ ಡಾ.ಕೆ.ಧನಂಜಯ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಬಿಇಒ ಶಿವರಾಜು, ದೈಹಿಕ ಶಿಕ್ಷಣ ಪರಿವೀಕ್ಷಕ ಮಹದೇವ್, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಪಪಂ ಉಪಾಧ್ಯಕ್ಷ ಗಿರೀಶ್, ಮುಖ್ಯಾಧಿಕಾರಿ ಮೂರ್ತಿ, ಆಶಾ, ಅಂಗನವಾಡಿ ಕಾರ್ಯಕರ್ತರು ಇದ್ದರು.