ಚಾಮರಾಜನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿಯನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು. ನಿಜಗುಣರಾಜು, ಆಶಾ ನಟರಾಜು, ಕೆ.ಎಸ್.ಸುಂದರ್‌ರಾಜ್ ಮತ್ತಿತರರಿದ್ದರು. 
ಜಿಲ್ಲೆ

ಸವಲತ್ತು ಪಡೆದು ಆರ್ಥಿಕವಾಗಿ ಸದೃಢರಾಗಿ

Chamarajanagar

ಚಾಮರಾಜನಗರ: ವಿಶ್ವಕರ್ಮ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ರಚಿಸಿರುವ ನಿಗಮ, ಮಂಡಳಿಗಳಿಂದ ಸಿಗುವ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಿ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಸಲಹೆ ನೀಡಿದರು.

ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಿಂದೆ ವಿಶ್ವಕರ್ಮರು ಎಲ್ಲ ಉದ್ಯೋಗಗಳನ್ನು ಬಲ್ಲವರಾಗಿದ್ದರು. ಇಡೀ ಮಾನವ ಕುಲಕ್ಕೆ ವಿಶ್ವಕರ್ಮರ ಕಾಯಕ ಅಗತ್ಯವಾಗಿದೆ ಎಂದರು.

ಕಾಡಾ ಅಧ್ಯಕ್ಷ ಬಿ.ನಿಜಗುಣರಾಜು ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ವಿಶ್ವಕರ್ಮ ಮಾಡದ ಕೆಲಸವಿಲ್ಲ ಎಂಬಂತೆ ವಿಶ್ವಕರ್ಮ ಸಮಾಜದವರು ಚಿನ್ನ, ಕಬ್ಬಿಣ, ಮರಗೆಲಸ ಇತ್ಯಾದಿ ಕೆಲಸಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಸರ್ಕಾರವು ವಿಶ್ವಕರ್ಮರ ಕಸುಬನ್ನು ತಾಂತ್ರಿಕವಾಗಿ ಮತ್ತಷ್ಟು ಅಭಿವೃದ್ಧಿಪಡಿಸಬೇಕಿದೆ ಎಂದರು.

ಮೈಸೂರು ಮಹಾರಾಣಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಸಿ.ತೇಜೋವತಿ ಮುಖ್ಯಭಾಷಣ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ವಿಶ್ವಕರ್ಮರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಡನೆ ಹೊರಟ ಮೆರವಣಿಗೆಗೆ ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ನಗರಸಭೆ ಅಧ್ಯಕ್ಷೆ ಆಶಾ ನಟರಾಜು, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‌ರಾಜ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗೂಡೂರು ಭೀಮಸೇನ, ವಿಶ್ವಕರ್ಮ ನಿಗಮದ ಸದಸ್ಯ ಶ್ರೀನಿವಾಸಮೂರ್ತಿ, ಮಧು, ಸಮಿತಿಯ ಅಧ್ಯಕ್ಷ ಸೋಮಣ್ಣ ಆಚಾರ್, ಮುಖಂಡರಾದ ಅನಂತಕುಮಾರ್ ಉಪಸ್ಥಿತರಿದ್ದರು.