ಧಾರವಾಡ: ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ)ದ ಪರವಾನಗಿ ಪಡೆಯದೆ ಇಲ್ಲಿಯ ಸವದತ್ತಿ ರಸ್ತೆ ಬಳಿಯ ಸುಮಾರು 8 ಎಕರೆ ಜಾಗದಲ್ಲಿ ನಿರ್ವಿುಸಿದ್ದ ಅನಧಿಕೃತ ಲೇಔಟ್ಗಳನ್ನು ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಮಂಗಳವಾರ ತೆರವು ಮಾಡಲಾಯಿತು.
ಪರವಾನಗಿ ಪಡೆಯದೆ ನಿವೇಶನಗಳನ್ನು ಅಭಿವೃದ್ಧಿ ಪಡಿಸಿದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರಿಗೆ ಹುಡಾ ವತಿಯಿಂದ 2 ಬಾರಿ ನೋಟಿಸ್ ನೀಡಲಾಗಿತ್ತು. ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ನಿವೇಶನಗಳಲ್ಲಿ ಹಾಕಿದ್ದ ಕಲ್ಲು, ರಸ್ತೆಗಳು ಹಾಗೂ ನೀರಿನ ಪೈಪ್ಗಳನ್ನು ಜೆಸಿಬಿ ಮೂಲಕ ಧ್ವಂಸ ಮಾಡಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ‘ಹು-ಧಾ ಅವಳಿನಗರದಲ್ಲಿ ಸದ್ಯ 57 ಅನಧಿಕೃತ ಲೇಔಟ್ಗಳನ್ನು ಪತ್ತೆ ಮಾಡಲಾಗಿದೆ. ಇನ್ನೂ ನೂರಾರು ಲೇಔಟ್ಗಳಿದ್ದು, ಅವುಗಳ ಪತ್ತೆ ಕಾರ್ಯ ನಡೆದಿದೆ. ಅನಧಿಕೃತ ಲೇಔಟ್ಗಳಿಗೆ ಬಡ ಜನರೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಪಶು ಆಗುತ್ತಿದ್ದಾರೆ. ಹೀಗಾಗಿ ಅದನ್ನು ತಡೆಯುವ ನಿಟ್ಟಿನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದರು.
ಅನಧಿಕೃತ ಲೇಔಟ್ಗಳನ್ನು ಅಧಿಕೃತ ಮಾಡಿಕೊಳ್ಳಲು ಸಮಯ ನೀಡಲಾಗಿದೆ. ತೆರವು ಕಾರ್ಯಾಚರಣೆಗೆ ಅನೇಕರು ತಡೆಯೊಡ್ಡುತ್ತಿದ್ದಾರೆ. ಆದರೆ, ಯಾವುದಕ್ಕೂ ಬಗ್ಗದೆ ನಿರಂತರವಾಗಿ ತೆರವು ಕಾರ್ಯ ನಡೆಸಲಾಗುವುದು. ಧಾರವಾಡದಲ್ಲಿ ಇನ್ನೂ ಒಂದು ವಾರ ಕಾಲ ಈ ಕೆಲಸ ನಡೆಯಲಿದೆ ಎಂದರು.