ಗೋಣಿಕೊಪ್ಪ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ ನೇಮಕಗೊಂಡಿರುವ ಗೋಣಿಕೊಪ್ಪಲಿನ ನಾಯಂದರ ಶಿವಾಜಿ ಅವರನ್ನು ಬುಧವಾರ ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು. ಹಲವು ವರ್ಷಗಳ ನಂತರ ಸಾಹಿತ್ಯ ಅಕಾಡೆಮಿಯಲ್ಲಿ ಸವಿತಾ ಸಮಾಜಕ್ಕೆ ಆದ್ಯತೆ ನೀಡಿರುವುದನ್ನು ಈ ಸಂದರ್ಭ ಶ್ಲಾಘಿಸಲಾಯಿತು.
ಕೊಡಗಿನ ಮೂಲ ನಿವಾಸಿಗಳಿಗೆ ವಿವಿಧ ಕ್ಷೇತ್ರದಲ್ಲಿ ಆದ್ಯತೆ ನೀಡುವ ಮೂಲಕ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸಾಮಾಜಿಕ ನ್ಯಾಯ ನೀಡಿದ್ದಾರೆ ಎಂದು ಪೊನ್ನಂಪೇಟೆ ಸವಿತಾ ಸಮಾಜದ ಅಧ್ಯಕ್ಷ ಪೂಣಚೀರ ಎಸ್.ಮನೋಜ್ ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಾಯಂದಿರ ಶಿವಾಜಿ ಇದೇ ಮೊದಲ ಬಾರಿಗೆ ಸಮುದಾಯದ ಐನ್‌ಮನೆಗಳ ಅಭಿವೃದ್ದಿಗೆ ಶಾಸಕ ಪೊನ್ನಣ್ಣ ಅನುದಾನ ಬಿಡುಗಡೆಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಐನ್‌ಮನೆಗಳ ಅಭಿವೃದ್ಧಿಗಾಗಿ ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ಕಾರ್ಯದರ್ಶಿ ಪ್ರವೀಣ್, ಪದಾಧಿಕಾರಿಗಳಾದ ಬೇಬಿ, ದೇವಯ್ಯ, ಮನು, ಕಿಶೋರ್, ಸುತ್ತನ್, ಸುಮನ್, ಸಬಿತಾ, ಶರಿನ್ ಇತರರಿದ್ದರು.